ರಕ್ಷಿಸೋ ನಮ್ಮ ಅನವರತ ರಕ್ಷಿಸೋ....
*ರಕ್ಷಿಸೋ ನಮ್ಮ ಅನವರತ ರಕ್ಷಿಸೋ....*
ಭಕ್ತಿ ಜ್ಙಾನ ವಿರಕ್ತಿ ಇವುಗಳ ಗಣಿಗಳು ಎಲ್ಲ ಮಹನೀಯರುಗಳು. ಆ ಮಹನೀಯರುಗಳಲ್ಲಿ ಒಬ್ಬರು *ಕನಕದಾಸರು.* ಭಕ್ತಿ ಭರವಸೆಗಳಿಂದಲೇ ಉಡುಪಿಯ ಶ್ರೀಕೃಷ್ಣನನ್ನೇ ಒಲಿಸಿಕೊಂಡವರು.
ಕನಕದಾಸರು ಶ್ರೀವ್ಯಾಸರಾಜರಿಂದ ವೈಷ್ಣವ ದೀಕ್ಷೆಯನ್ನು ಪಡೆದು ಅನೇಕ ಗದ್ಯ ಪದ್ಯ ಹಾಡು ಉಗಾಭೋಗ ಸುಳಾದಿ ಮತ್ತು ಹರಿಭಕ್ತಿ ಸಾರ ಮುಂತಾದ ಅನೇಕ ಕೃತಿಗಳನ್ನು ರಚಿಸಿದರು.
ಕನಕದಾಸರ ಕೃತಿಗಳಲ್ಲಿ ಪದಗಳ ಲಾಲಿತ್ಯ, ಕಠಿಣತೆ, ಸರಳ ಕಥೆ, ನೀತಿ, ಭಕ್ತಿ, ಬೋಧೆ, ಭರವಸೆ, ತಾದಾತ್ಮ್ಯ, ದಾಸ್ಯ, ವೈರಾಗ್ಯ ಈ ತರಹದ ಬಗೆಬಗೆಯ ವೈವಿಧ್ಯವನ್ನು ಕಾಣುತ್ತೇವೆ. ಅಂತೆಯೇ *ಕನಕನನ್ನು ಕೆಣಕಬೇಡ, ಕೆಣಕಿ ತಿಣುಕಬೇಡ* ಎಂಬ ನಾಣ್ಣುಡಿ ಕನಕರು ಬದುಕಿರುವಾಗಲೇ ಪ್ರಸಿದ್ಧಿಗೆ ಬಂತು.
*ಹರಿ ಭಕ್ತಿ ಸಾರ*
ನೂರೆಂಟು ಶ್ಲೊಕಗಳನ್ನೊಳಗೊಂಡ,ಮಹಾಭಾರತ ಕಥೆಗಳನ್ನು ಆಧರಿಸಿ, ಭಗವದ್ಭಕ್ತಿ ಮಹಿಮಾವಬೋಧಕ ಪರಮ ಸುಂದರ ಕೃತಿ *ಹರಿಭಕ್ತಿ ಸಾರ.*
*ರಕ್ಷಿಸೋ ನಮ್ಮ ಅನವರತ ರಕ್ಷಿಸೋ*
ಹರಿಭಕ್ತಿ ಸಾರದಲ್ಲಿ ಬರುವ ನೂರೆಂಟು ಶ್ಲೋಕಗಳಲ್ಲಿಯೂ ಕೊನೆಗೆ *ರಕ್ಷಿಸೋ ನಮ್ಮ ಅನವರತ* ಎಂಬುದಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ರಕ್ಷಣೆ ಭರವಸೆಇರುವಲ್ಲಿ ಇರುತ್ತದೆ, ರಕ್ಷಣೆ ದಾಸ್ಯಭಾವ ಇರುವಲ್ಲಿ ಇರುತ್ತದೆ. *ನೀನು ಮಹಾನ್ , ನಾನು ನಿನ್ನ ಕುನ್ನಿದಾಸ* ಅಂತೆಯೇ ಅನವರತ ಎನ್ನನು ರಕ್ಷಿಸು ಎಂದು ಪ್ರಾರ್ಥನೆ ಒಂದಾದರೆ.
ಕೇವಲ ನನ್ನ ರಕ್ಷಣೆ ಮಾತ್ರ ಬೇಡ *ನಮ್ಮ* ರಕ್ಷಣೆ ಮಾಡು. ನಮ್ಮ ಅಂದರೆ ನಾನು, ನನ್ನ ಕುಲ, ನನ್ನ ಸಮಾಜ, ನನ್ನ ಸಂಸ್ಥೆ, ನಮ್ಮ ಜನ, ನಮ್ಮ ಊರು, ನಮ್ಮ ದೇಶ, ನಮ್ಮ ಲೋಕಗಳು, ನಮ್ಮ ಬ್ರಹ್ಮಾಂಡ ಹೀಗೆ ಎಲ್ಲವನ್ನೂ ರಕ್ಷಿಸು ಎಂಬ ಭಾವದಲ್ಲಿ *ನಮ್ಮ* ಎಂಬ ಶಬ್ದವನ್ನು ಇರಿಸಿ ಸೂಚಿಸುತ್ತಾರೆ. ಜೊತೆಗೆ....
ಬ್ರಹ್ಮ ಸೃಷ್ಟಿ ಕರ್ತನಾದರೆ, ಶುವ ಸಂಹಾರ ಕರ್ತ, ಸ್ಥಿಕಾರಕ ವಿಷ್ಣುವೇ ಆದ್ದರಿಂದ ವಿಷ್ಣುವನ್ನೇ ವಿಶೇಷವಾಗಿ ಕೊಂಡಾಡುತ್ತಾರೆ. ಹೀಗೆ ಭಗವಂತನ ನಾನಾ ಮಹಿಮೆಗಳನ್ನು, ರಕ್ಷಣೆ ಮಾಡಿದ ಪರಿಯನ್ನು ತಿಳಿಸುತ್ತಾ, ಕೊಂಡಾಡುತ್ತಾ ಒಂದು ಸುಂದರ ಮಾತನ್ನು ತಿಳಿಸುತ್ತಾರೆ *ಚತುರೋಪಾಯ* ಎಂಬುವದಾಗಿ.
*ಹೇ ಚತುರೋಪಾಯ..!!*
ರಕ್ಷಣೆ ಮಾಡಿಕೊಳ್ಳುವದು ಎಲ್ಲರ ಹೊಣೆ. ರಕ್ಷಣೆ ಮಾಡುವ ಅಥವಾ ಮಾಡಿಕೊಳ್ಳಲು ಬೇಕಾದ ಉಪಾಯಗಳು ಮಾತ್ರ ಯಾರಲ್ಲಿಯೂ ಇರುವದಿಲ್ಲ. ಹಾಗಾಗಿ ಏನ್ನನ್ನೂ (ಆಯುಷ್ಯ, ಆರೋಗ್ಯ, ಜ್ಙಾನ, ಭಕ್ತಿ, ವೈರಾಗ್ಯ, ಹಣ, ಮನೆ, ಜನ, ಬಂಧು, ಊರು, ಕೆರೆ, ....) ರಕ್ಷಿಸಿಕೊಳ್ಳಲು ನಮ್ಮಿಂದ ಹೇಗೆ ಆಗುವದಿಲ್ಲವೋ, ಹಾಗೇ ದೇವರಿಗೂ ಸಮಸ್ಯೆಗಳುಂಟೇ... ???
*ಯತ್ರ ಯೋಗೇಶ್ವರಃ ಕೃಷ್ಣಃ* ರಕ್ಷಿಸಲು ಬೇಕಾದ ಎಲದಲ ತರಹದ ಉಪಾಯಗಳನ್ನು ಹೊಂದಿರುವ ದೇವರು ನಮ್ಮ ಪಕ್ಷದಲ್ಲಿ ಇರುವಾಗ ದೇವರುಗೂ ಸೋಲು ಇಲ್ಲ. ದೇವರವರಾದ ನಮಗೂ ಸೋಲು ಇರುವದಿಲ್ಲ. ಅಂತೆಯೇ ಶ್ರೀಕೃಷ್ಣ *ಚತುರೋಪಾಯ* ಎಂದು ದಾಸರು ಕೊಂಡಾಡುತ್ತಾರೆ. ಆ ಹರಿ ಭಕ್ತಿ ಸಾರವನ್ನು ಕೇಳೋಣ, ಅರ್ಥವನ್ನು ತಿಳಿದುಕೊಳ್ಳೋಣ. ದೇವರಲ್ಲಿ ನಿಸ್ಸೀಮ ಭರವಸೆ ಇಡೋಣ. ಅವನು ರಕ್ಷಿಸಿಯೇ ತೀರುವ ಎಂಬ ಪೂರ್ಣ ವಿಶ್ವಾಸವನ್ನೂ ಇಡೋಣ.
*✍🏽✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments