ಕೇಳುವಿಕೆಯಲ್ಲಿ ತಾಳ್ಮೆಯ ಆವಶ್ಯಕತೆ ......*

*ಕೇಳುವಿಕೆಯಲ್ಲಿ ತಾಳ್ಮೆಯ ಆವಶ್ಯಕತೆ ......*

ನೋಡುವ ಶಕ್ತಿಗಿಂತಲೂ ನೂರುಪಟ್ಟು ಹೆಚ್ಚು ಕೇಳುವಶಕ್ತಿಗೆ ಇದೆ. ಇದು ಎಲ್ಲರ ಅನುಭವಸಿದ್ಧ.  ನೋಡುವದಕ್ಕೂ ಕೇಳುವದಕ್ಕೂ ತಾಳ್ಮೆ ಇಲ್ಲ. ಇದುವೂ ಅಷ್ಟೇ ನಿಜ. 

ನೋಡುವದರಿಂದ ತಿಳುವಳಿಕೆ ಬರದು, ತಿಳುವಳಿಕೆ ಕೇಳುವದರಿಂದಲೇ ಬರುವದು. ಜೀವ ತಿಳಿದವನು ಎಂದಾಗುವದು ಕೇಳುವದರಿಂದಲೇ. ಆ ಕಾರಣದಿಂದಲೋ ಏನೋ ಕೇಳುವದಕ್ಕೆ ತುಂಬ ಪ್ರಾಶಸ್ತ್ಯವಿದೆ. ಕೇಳುವದರಲ್ಲಿ ತಾಳ್ಮೆ ಅತ್ಯವಶ್ಯಕ. 

ಜೀವನದ ಸಾಗಣಿಕೆಯಲ್ಲಿ ಎಡವದು ಸಹಜ. ಎಡುವ ಸ್ಥಳಗಳು ನೂರಾರು. ಎಡುವಿ ಬಿದ್ದಾಗ ಕ್ಷಣದಲ್ಲಿ ಸುಧಾರಿಸಿಕೊಳ್ಳುವವು ನೂರಾದರೆ, ಕೊನೆಯುಸಿರು ಇರುವವರೆಗೂ ಸುಧಾರಿಸಿಕೊಳ್ಳಲಾಗದ್ದು ಮತ್ತೆ ಕೆಲವು. ಜನ್ಮ ಜನ್ಮಗಳುರುಳಿದರೂ ಸುಧಾರಿಸಿಕೊಳ್ಳಲಾಗದ್ದು ಮತ್ತೆ ಅನೇಕ. ಅಂತೂ ಎಡುವದರ ಭಯ ಇದ್ದದ್ದೇ. ಭಯದ ಅರಿವು ಇದ್ದ ವ್ಯಕ್ತಿ ಎಚ್ಚರಿಕೆಯಿಂದ ನಡೆಯುವ, ಎಡುವಲಾರ. ಭಯದ ಅರಿವು ಮೂಡುವದು ಕೇಳುವದರಿಂದಲೇ. 

ಸುದೀರ್ಘವಾದ ಜೀವನ. ಅದರಲ್ಲಿ ಯಶಸ್ಸಿನ ಉತ್ತುಂಗ ತೋರಿಸುವ ದೀಪಾವಳಿಗಳು ಅಲ್ಲಲ್ಲಿ ಇರುತ್ತವೆ. ಯಶಸ್ಸಿನ ದಾರಿ ತೋರಿಸುವ ದೀಪಗಳು ಮಿಣಕು ದೀಪಗಳು. ಸುಲಭದಲ್ಲಿ ಕಣ್ಣಿಗೆ ಕಾಣವು. ಅಯಶಸ್ಸು ಅಪಕೀರ್ತಿಗೊಳಪಡಿಸುವ ದೀಪಗಳಂತೆ ಆರ್ಭಟ ಇರುವದಿಲ್ಲ. ಆ ಮಿಣುಕು ದೀಪಗಳ ಮಾರ್ಗದಲ್ಲಿ ಇಳಿದು ಮಹಾನ್ ಯಶಸ್ಸು ಕೀರ್ತಿ ಪಡೆಯಬೇಕಾದರೆ ಗುರು ಹಿರಿಯರುಗಳಿಂದ ಕೇಳುವದು ಅನಿವಾರ್ಯ. ಅಂತೆಯೇ ಕೇಳುವದರಲ್ಲಿ ತಾಳ್ಮೇ ಬೇಕು...

ಧೃತರಾಷ್ಟ್ರ ತನ್ನ ಔರಸ ಮಗನಾದ ದುರ್ಯೋಧನನಿಗೆ ಸುಂದರವಾದ ಮಾತನ್ಬು ಹೇಳುತ್ತಾನೆ. ನಾನು ಗಾಂಧಾರಿ ವೇದವ್ಯಾಸರು ಹೇಳುವ ಮಾತನ್ನು ಅತ್ಯಂತ ತಾಳ್ಮೆ ಇಂದ ಕೇಳಲು ಕಲಿ. ಕೇಳುವದಕ್ಕೆ ನೀನು ತಳ್ಮೆಯನ್ನು ಸಂಪಾದಿಸಿಕೊಂಡೀ ಎಂದಾದರೆ ಮಹಾನ್ ಭಯದಿಂದ ವಿಮುಕ್ತನಾದೀ ಎಂದರ್ಥ. ನಿನಗೆ ನೂರಾರು ಸಾವಿರಾರು ಭಯಗಳಿಂದ ಪಾರಾಗುವ ಸಾವಿರ ಸಾವಿರ ಮಾರ್ಗಗಳು ದೊರೆತವೂ ಎಂದರ್ಥ. ಯಶಸ್ಸು ಕೀರ್ತಿಗಳಿಗೆ ರಾಜಮಾರ್ಗ ಸಿಕ್ಕಿತೂ ಎಂದೇ ಅರ್ಥ. ಹೇಳುವದನ್ನು ಏಕಾಗ್ರದಿಂದ ಕೇಳು ಎಂದು ಉದ್ಯೋಗ ಪರ್ವದಲ್ಲಿ ನಾನಾ ಮುಖದಿಂದ ಉಪದೇಶ ಮಾಡುತ್ತಾನೆ. ಒಂದಂತೂ ನಿಜ *ಹಾಳಾಗುವ ವ್ಯಕ್ತಿಗೆ ಉಪದೇಶ ನಾಟದು* ಹಾಗಾಗಿ ಕೇಳಲೇ ತಯಾರು ಆಗದ, ಸಿದ್ಧನಾಗದ ದುರ್ಯೋಧನ ಸತ್ತೇ ಹೋದ. ಇಂದಿಗೂ ಮಹಾನ್ ಅಪಕೀರ್ತಿ ಅಯಶಸ್ಸುಗಳಿಗೆ ಭಾಜನನಾದ. 

ಯುದ್ದದ ಸಮಯ. ಶಂಖನಾದ ಆಗ್ತಿದೆ. ಎಲ್ಲರಲ್ಲಿಯೂ ರಣೋತ್ಸಾಹ. ಆ ಸಮಯದಲ್ಲಿ ಕೃಷ್ಣ ಹೇಳಲು ಆರಂಭಿಸಿದ. ಹದಿನೆಂಟು ಅಧ್ಯಾಯ, ಹೆಚ್ಚುಕಡಿಮೆ ಸಾವಿಶ್ಲೋಕ, ಗಹನಾತಿಗಹನವಾದ ವಿಚಾರಗಳನ್ನೊಳಗೊಂಡ ಗೀತೆಯನ್ನು ತಾಳ್ಮೆಯಿಂದ ಕೇಳಿದ ಅರ್ಜುನ. ಭಯ ಕಳೆದುಕೊಂಡ, ಸನ್ಮಾರ್ಗ ಪಡೆದುಕೊಂಡ, ಎಲ್ಲಶತ್ರುಗಳನ್ನೂ ಸಂಹರಿಸಿದ, ಮಹಾನ್ ಕೀರ್ತಿ ಯಶಸ್ಸು ಪುಣ್ಯ ಭಗವತ್ಪ್ರೀತಿ ಇವುಗಳಿಗೆ ಪಾತ್ರನಾದ. 

ಕೇಳವದರಲ್ಲಿ ತಾಳ್ಮೆ ಇದ್ದರೆ ನೂರು ಮಾರ್ಗಗಳು ಇವೆ. ಇಲ್ಲವಾದಲ್ಲಿ ನಾನು, ನನ್ನ ಅಹಂನಿಂದ  ತಿಳಿದ ಒಂದೇ ಮಾರ್ಗವಿರತ್ತೆ. ಆ ಮಾರ್ಗ ನನ್ನನ್ನೇ ಮುಗಿಸುವ ಮಾರ್ಗವಾಗಿರಲೂ ಬಹುದು. ಧರ್ಮ ಶಾಸ್ತ್ರ ಬೋಧಿಸಿರುವದನ್ನು, ಗುರು ಹಿರಿಯರು ಹೇಳಿದ್ದನ್ನು ಕೇಳುವದಕ್ಕೆ ಆರಂಭಿಸೋಣ ....

ಅಂತೆಯೇ ಸಾಧನೆಯಲ್ಲಿ ಮೊಟ್ಟ ಮೊದಲ ಮೆಟ್ಟಿಲು *ಶ್ರವಣ*  "ಶ್ರವಣಂ ಕೀರ್ತನಂ ವಿಷ್ಣೋಃ, ಶ್ರವಣ ಮನನ ನಿಧಿಧ್ಯಾಸನ" ಹೀಗೆಲ್ಲ ಶ್ರವಣವನ್ನೇ ಮೊದಲಿಗೆ ತಿಳಿಸಿರುವಂತಹದ್ದು. *ಶ್ರವಣದಲ್ಲಿ ತಾಳ್ಮೆ ಅತ್ಯವಶ್ಯಕ.....*

*✍🏽✍🏽✍🏽ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
9449644808

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*