*ಶ್ರೀ ಶ್ರೀ ಪದ್ಮನಾಭ ತೀರ್ಥರು.... 3*
*ಶ್ರೀ ಶ್ರೀ ಪದ್ಮನಾಭ ತೀರ್ಥರು*
ರಮಾನಿವಾಸೋಚಿತವಾಸಭೂಮಿಃ
ಸನ್ಯಾಯರತ್ನಾವಲಿ ಜನ್ಮಭೂಮಿಃ |
ವೈರಾಗ್ಯಭಾಗ್ಯೋ ಮಮ ಪದ್ಮನಾಭ-
ತೀರ್ಥಾಮೃತಾಬ್ಧಿಃ ಭವತಾತ್ ವಿಭೂತ್ಯೈ ||
ಶ್ರೀ ಶ್ರೀ ಪದ್ಮನಾಭತೀರ್ಥರ ಉತ್ತರ ಆರಾಧನಾ ಮಹೋತ್ಸವ. ಆದಿಟೀಕಾಕಾರರೆಂದೇ ಪ್ರಸಿದ್ಧರಾದವರು ಶ್ರೀಪದ್ಮನಾಭತೀರ್ಥರು. ಅವರು ರಚಿಸಿದ ಟೀಕೆಗಳೂ ಅದ್ಭುತವೇ...
ಸೂತ್ರಭಾಷ್ಯಕ್ಕೆ ಸತ್ತರ್ಕದೀಪಾವಲಿ, ಅನುವ್ಯಾಖ್ಯಾನಕ್ಕೆ ಸನ್ಯಾಯರತ್ನಾವಲಿ, ಖಂಡನತ್ರಯಗಳಿಗೆ ಟೀಕೆ, ಗೀತಾಭಾಷ್ಯ ಹಾಗೂ ಗೀತಾತಾತ್ಪರ್ಯಗಳಿಗೆ ಟೀಕೆ, ತತ್ವದ್ಯೋತ ತತ್ವನಿರ್ಣಯ ತತ್ವಸಂಖ್ಯಾನ ಕರ್ಮನಿರ್ಣಯಗಳಿಗೆ ಟೀಕೆ, ಹೀಗೆ ಶ್ರೀಮದಾಚಾರ್ಯರ ಅನೇಕ ಮೂಲಗ್ರಂಥಗಳಿಗೆ ಟೀಕೆಯನ್ನು ಬರೆದ ಮಹಾತ್ಮರಿವರು.
*ಸೌಭಗ್ಯವಂತರೋ ಇವರು*
ಸತ್ಸಿದ್ಧಾಂತವಾದ ವಾಯುದೇವರ ಶಾಸ್ತ್ರವಾದ ದ್ವೈತಸಿದ್ಧಾಂತವನ್ನು ಓದಿದರೇ ಮೋಕ್ಷಾದಿ ಪುರುಷಾರ್ಥಗಳು ಎಂದು ನಂಬಿರುವಾಗ, ಸ್ವಯಂ ವಾಯುದೇವರ ಅವತಾರಿಗಳಾದ ಶ್ರೀಮದಾಚಾರ್ಯರಿಂದಲೇ ನೇರವಾಗಿ ಸರ್ವ ಶಾಸ್ತ್ರಗಳನ್ನು ಓದುವ ಸೌಭಾಗ್ಯ ಪಡೆದ ಅನೇಕರಲ್ಲಿ ಅತ್ಯುತ್ತಮರು ಶ್ರೀ ಪದ್ಮನಾಭತೀರ್ಥರು.
*ಸ್ಪರ್ಶನಾತ್ ಭಗವತೋತಿ ಪಾವನಾತ್ ಸನ್ನಿಧಾನಪದತಾಂ ಗತಾಂ ಹರೇಃ* ಎಂದು ನಾರಾಯಣ ಪಂಡಿತಾಚಾರ್ಯರು *ಉಡುಪಿಯ ಶ್ರೀಕೃಷ್ಣ ಹಾಗೂ ಆರಾಧಕ ಶ್ರೀಮದಚಾರ್ಯರ ದಿವ್ಯ ಮಹಿಮೆ* ತಿಳಿಸಿದಂತೆ ಯೋಚಿಸಿದಾಗ, ಸರಿಯಾಗಿ ಎಂಭತ್ತು ವರ್ಷಗಳ ಕಾಲ ನಿರಂತರ ಪೂಜಿಸಿದ *ದಿಗ್ವಿಜಯರಾಮ ದೇವರನ್ನು* ಶ್ರೀಮದಾಚಾರ್ಯರ ತರುವಾಯ ಮೊಟ್ಡ ಮೊದಲು ಪೂಜಿಸುವ ಸೌಭಾಗ್ಯ ದೊರೆತಿರುವದು ಶ್ರೀ ಪದ್ಮನಾಭತೀರ್ಥರಿಗೆ ಮಾತ್ರ.
ಸಾಕ್ಷಾತ್ ಬ್ರಹ್ಮದೇವರಿಂದ ಪೂಜಿತವಾದ, ನರಹರಿತೀರ್ಥರಿಂದ ತರಲ್ಪಟ್ಟ *ಶ್ರೀಮನ್ಮೂಲರಾಮ ಶ್ರೀಸೀತಾದೇವಿಯರನ್ನು* ಭಾವಿಬ್ರಹ್ಮರಾದ ಶ್ರೀಮದಾಚಾರ್ಯರ ತರುವಾಯ 1317-1324 ನೇಯ ಇಸವಿಯ ವರೆಗೆ ಏಳು ವರ್ಷಗಳ ಕಾಲ ನಿರಂತರ ಆರಾಧಿಸುವ ದೊಡ್ಡ ಸೌಭಾಗ್ಯವಂತರು ಶ್ರೀ ಪದ್ಮನಾಭತೀರ್ಥರು.
ಜಗದೊಡೆಯನಾದ, ಜಗಜ್ಜನ್ಮಾದಿ ಕಾರಣನಾದ, ಬ್ರಹ್ಮಾದಿ ದೇವತೆಗಳಿಗೆ ನಿರಂತರ ಶಾಸ್ತ್ರಪಾಠವನ್ನು ಉಪದೇಶಿಸುವ, ಜ್ಙಾನ ಅಭಯಗಳನ್ನು ನಿರಂತರ ಸುರಿಸುವ ಶ್ರೀವೇದವ್ಯಾಸರು, ಅಚ್ಚುಮೆಚ್ವಿನ ಮಗ ಶಿಷ್ಯ ಸರ್ವಸ್ವರೂ ಆದ ಶ್ರೀಮದಾಚಾರ್ಯರಿಗೆ ಪ್ರೀತಿಯಿಂದ ಅನುಗ್ರಹಪೂರ್ವಕ ಕೊಡಲ್ಪಟ್ಟ *ಎಂಟು ವ್ಯಾಸಶಿಲೆಗಳಲ್ಲಿಯ ಐದು ವ್ಯಾಸಶಿಲೆಗಳನ್ನು* ಮೊಟ್ಟ ಮೊದಲು ಪೂಜಿಸುವ ಸೌಭಾಗ್ಯ ಶ್ರೀಪದ್ಮನಾಭತೀರ್ಥರದ್ದೇ...
ಕೊನೆಗೆ 1324 ನೆಯ ಇಸ್ವಿಯ ಕಾರ್ತೀಕ ಮಾಸದ ಅಮಾವಾಸ್ಯೆಯ ದಿನದಂದು, ತುಂಗಭದ್ರೆಯ ನುಡುಗಡ್ಡೆಯಾದ, ಇಂದಿನ ನವವೃಂದಾವನ ಗಡ್ಡೆ ಎಂದೇ ಪ್ರಸಿದ್ಧವಾದ ಸ್ಥಳದಲ್ಲಿ ಮಳೆ ಗಾಳಿ ಬಿಸಿಲು ಏನನ್ನೂ ಲೆಕ್ಕಿಸದೇ ಅತ್ಯಂತವಿರಕ್ತ ಶಿಖಾಮಣಿಗಳಾಗಿ ವೃಂದಾವನದಲ್ಲಿ ಇಂದಿಗೂ ವಾಸಮಾಡಿ ಇದ್ದಾರೆ. ಬಂದ ಭಕ್ತರಿಗೆ ಸಕಲಾಭೀಷ್ಟೆಗಳನ್ನೂ ಈಡೇರಿಸುತ್ತಾರೆ. ಕರೆದವರ ಮನೆ ಮನಗಳಲ್ಲಿ ವಾಸ ಮಾಡಿ ನಮ್ಮೆಲ್ಲರಿಗೂ ಅನುಗ್ರಹವನ್ನೂ ಮಾಡುತ್ತಾರೆ. ಅಂತಹ ಮಹಾನ್ ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳನ್ನು ಭಕ್ತಿಪೂರ್ವಕ ಸಲ್ಲಿಸೋಣ.....
*✍🏽✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments