*ಈ ಗತಿ !! ಅವನತಿ !!*
*ಈ ಗತಿ !! ಅವನತಿ !!*
ಮಾನವ ನಿರಂತರ ಗಮನಶೀಲ. ಗಮನಶೀಲ ಮಾನವನಿಗೆ ಗಮ್ಯಸ್ಥಾನದ ಗುರಿಯೂ ಇರುತ್ತದೆ. ಗಮ್ಯಸ್ಥಾನವನ್ನು ತಲುಪುವ ಭರದಲ್ಲಿ *ಉನ್ನತಿ- ಅವನತಿ* ಗಳ ಕಡೆ ಗಮನ ಕಡಿಮೆಯಾಗಿರುತ್ತದೆ.
ನಾವಾರಿಸಿಕೊಂಡ ಮಾರ್ಗದ ಮುಖಾಂತರ ನಾವು ಪಡೆದದ್ದನ್ನು ನಮ್ಮ ಉನ್ನತಿಯ ಮಾರ್ಗವಾಗದೆ, ಅವನತಿಯತ್ತ ಸಾಗಿದ್ದರೂ ಉನ್ನತಿಯ ಮಾರ್ಗ ಎಂದೇ ನಾವು ಪ್ರತಿಪಾದಿಸಲೇಬೇಕು, ಸಮರ್ಥಿಸುತ್ತೇವೆಯೂ ಸಹ. ಅದು ಅನಿವಾರ್ಯ. ಯಾಕೆಂದರೆ ಆ ಮಾರ್ಗವನ್ನು ಆರಿಸಿದವ ನಾನು, ಹೊರಟವ ನಾನು. ನಾನೇ ಸಮರ್ಥಿಸಿಕೊಳ್ಲಬೇಕು.
*ಸಿಹಿಯಾದ ಹಣ್ಣನ್ನು, ಕೊಳಚೆಯಿಂದ ಮುಚ್ಚಿಡುವ ಪ್ರಯತ್ನ*
ನಮ್ಮ ಗಮ್ಯ ಸ್ಥಾನ ಸುಖ, ಶಾಂತಿ, ಸಮೃದ್ಧಿ, ಆನಂದ, ತ್ಯಾಗ, ನೆಮ್ಮದಿ ಮತ್ತು ಸಮಾಧಾನ ಇವುಗಳೆ. ಇವುಗಳು ಇರುವದು ನಮ್ಮಲ್ಲಿಯೇ. ಇವುಗಳನ್ನು ಕೊಡುವವ ನಮ್ಮೊಳಗಿರುವ ದೇವರೇ. ಇವುಗಳನ್ನು ಪಡೆಯುವದೇ ನಿಜವಾದ ಗತಿ. ಇವುಗಳನ್ನು ಪಡೆಯುವದಕ್ಕಾಗಿ ಹೊರಡುವ ಮಾರ್ಗ ಎಂದರೆ "ಕೊಡುವ ದೇವರ ಆರಾಧನೆ" ಯೊಂದೇ ಉತ್ತಮ ಮಾರ್ಗ.
ಸುಖ ಶಾಂತಿ ಸಮೃದ್ಧಿ ನೆಮ್ಮದಿಗೋಸ್ಕರ ನಾವು ಇಂದು ಆರಿಸಿಕೊಂಡ ಮಾರ್ಗ ಕೇವಲ ಧನಮಾರ್ಗ. ಧನ ಸಂಪಾದಿಸಿದರೆ ಸುಖ ಶಾಂತಿಯನ್ನು ಪಡೆಯಬಹುದು ಎಂಬ ಭಾವನೆಯಿಂದ ಆ ಮರ್ಗವನ್ನು ಆರಿಸಿದ್ದೇವೆ. ನಾವು ಆರಿಸಿದ ಮಾರ್ಗದಲ್ಲಿ ತುಂಬ ಎತ್ತರದಲ್ಲಿ ಸಾಗಿದ್ದೇವೆ. ಹತ್ತಿಪ್ಪತ್ತು ಐವತ್ತು ನೂರು ಲಕ್ಷ ಹಣ ಕಳೆದು ಕೊಂಡರೂ ಅದೊಂದು ಸಮಸ್ಯೆಯೇ ಅಲ್ಲ ಎನ್ನುವಷ್ಟು ಸಮೃದ್ಧ ಮಾರ್ಗದಲ್ಲಿ ಇದ್ದೇವೆ. ಮತ್ತೆ ಆ ಹಣವನ್ನು ಪಡೆದೂ ಸಂಪಾದಿಸಿಯೂ ತೀರುತ್ತೇವೆ. ಆದರೆ ಈ ಸಮೃದ್ಧಿ *ರುಚಿ ರುಚಿ ಹಣ್ಣನ್ನು, ಕೊಳಚೆಯಿಂದ ಮುಚ್ಚಿಂಟಂತೆಯೇ* ಆಗಿದೆ.
ಸೌಖ್ಯ ಶಾಂತಿಗಳು ಎಷ್ಟು ಕದಡಿವೆ ಎಂದರೆ ರುಚಿರುಚಿಯಾದ, ಬೇಕಾದ ಆಹಾರ ಎಷ್ಟು ಕೊಟ್ಟರೂ ನಿರ್ಭಿಡೆ ಇಂದ ಚೆಲ್ಲಿ ಹೋಗುತ್ತೇವೆ. ಅದೇ ಹಿಂದು "ಒಂದು ಅರಳಿಟ್ಟಿಗೆ, ಹನಿ ಎಣ್ಣಿ ಹಾಕಿ, ಮೆನಸಿನಕಾಯಿ ಮುರಿದು, ಎಷ್ಟು ರುಚಿಯಾಗಿದೆ, ತಿಂದು ನೋಡು" ಎಂದು ತಾವೂ ಆನಂದಿಸಿ, ಇನ್ನೊಬ್ಬರಿಗೂ ರುಚಿ ಹಚ್ಚಿಸುತ್ತಿದ್ದರು. "ಇದುವೇ ಸೌಖ್ಯ ಸಮಾಧಾನ ಶಾಂತಿ ತೃಪ್ತಿ ಸಮೃದ್ಧಿಗಳ ಸಂಕೆತ"
ಇಂದು ಅದ್ಭುತವಾದ ಹಣದ ಸಮೃದ್ಧಿಯಿಂದ ಶಾಂತಿ ಸೌಖ್ಯ ನೆಮ್ಮದಿ ಆನಂದ ಇವುಗಳು ತುಂಬ ದೂರಾಗಿವೆ, ಕಳೆದೇ ಕೊಂಡಿದ್ದೇವೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದರಿಂದ ದೇವರೂ ದೂರ. ಧರ್ಮವೂ ದೂರ. ಜಪ ತಪಗಳೂ ಅಸಾಧ್ಯ. ಅಧ್ಯಯನ ಅಧ್ಯಾಪನ ಕನಸಿನಲ್ಲೂ ಕಷ್ಟ. ಭಕ್ತಿ ಭಾವಗಳ ಅವಲೋಕನವೂ ಇರದು. ಒಟ್ಟಾರೆಯಾಗಿ ಇದೊಂದು ಅವನತಿಯ ಮಾರ್ಗವೆಂದೇ ಆಗಿಬಿಡುತ್ತದೆ.
*ಸುಖ ಸಮೃದ್ಧಿಗಳ ಗಣಿ*
ಸುಖ ಸಮೃದ್ಧಿ ತೃಪ್ತಿ ಇವುಗಳು ಹೊರ್ಎ ಬೇರೆಲ್ಲೂ ಇಲ್ಲ. ಇವುಗಳು ಇರುವದು ನನ್ನಲ್ಲಿಯೇ. ನನ್ನಲ್ಲಿ ಇರುವವುಗಳು ಇನ್ನೊಬ್ಬರದೂ ಅಲ್ಲ. ನನ್ನವೇ ಆಗಿವೆ. ನನ್ನವು ಆದವುಗಳನ್ನು ಮುಚ್ಚಿಟ್ಟು, ಹೊರಗಿನಿಂದ ಪಡೆಯುವವರು ನಾವು ಆಗಿದ್ದೇವೆ. "ಹೊರಗಿನದು ಏನಿದ್ದರೂ ಹೊರಗಿನದೇ, ಅದು ಇನ್ನೊಬ್ಬರದ್ದೇ, ಕೊನೆಗೆ ಇನ್ನೊಬ್ಬರಿಗೇ ಸೇರುವದು" ಇದು ನಿಶ್ಚಿತ.
*ನಮ್ಮದನ್ನು ನಾವು ಪಡೆಯಲು ಏನು ಮಾಡಬೇಕು..*
ಅವನತಿ ಉನ್ನತಿ ಮಾರ್ಗಗಳಸರಿಯಾದ ತಿಳುವಳಿಕೆಯ ಮುಖಾಂತರ, ಒಳಗಿರುವ ಕೊಳಚೆಯನ್ನು ಸರಿಸಲು ಯತ್ನಿಸಬೇಕು. ಅದು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ನಮ್ಮದೇ ಆದ, ನಮ್ಮ ಒಳಗಿರುವ, ನಮಗೆ ಎಲ್ಲವನ್ನೂ ಸುರಿಸುವ ದೇವರ ಆರಾಧನೆ, ಧ್ಯಾನ, ಪೂಜೆ, ಜಪ, ತಪಸ್ಸು, ಹೆಚ್ಚೆಚ್ಚು ಜ್ಙಾನ, ದೃಢವಾದ ಭಕ್ತಿ ಇವುಗಳನ್ನು ಬೆಳಿಸಿಕೊಂಡು ಆ ಭಗವಂತನನ್ನು ನಿತರಾಂ ಮೆಚ್ಚಿಸಿದಾಗ, ಅವನೇ ಖುದ್ದಾಗಿ ಬಂದು ನಮ್ಮ ಒಳಗಿರುವ ಕೊಳಚೆಯನ್ನು ಕಸಗೂಡಿಸಿ, ರುಚಿ ರುಚಿ ಹಣ್ಣನ್ನು ಒದಗಿಸುತ್ತಾನೆ. ಇದುವೇ *ಗತಿ* ಅವನತಿ ಮಾರ್ಗವಾಗದೆ ಉನ್ನತಿಯ ಮಾರ್ಗವೆಂದಾಗುತ್ತದೆ.
*ಎಲ್ಲರನು ಸಲಹುವನು*
ಎಲ್ಲರನ್ನು ಪ್ರೇರಿಸುವವನು ದೇವರು. ಸರಿಯಾದ ಕಡೆ ಪ್ರೇರಿಸಲು ಮೊರೆ ಇಡಬೇಕು ನಾನು. ಅತ್ಯಂತ ಆಪ್ತರಲ್ಲಿ ದುಖಗಳನ್ನು ತೋಡಿಕೊಳ್ಳುವಂತೆ, ದೇವರ ಮುಂದೆ ದುಃಖ ತೋಡಿಕೊಳ್ಳುವದು ಉತ್ತಮ ಮಾರ್ಗ. ಇದುವೇ ದೇವರಲ್ಲಿ ಮಾಡುವ ಪ್ರೀತಿ. *ದೇವರಿಗೆ ಅಸಾಧ್ಯವಾದದ್ದು ಯಾವದಿಲ್ಲ* ಎಂಬ ದೃಢವಾದ ನಂಬಿಕೆ. ಬೇಡುವದಾದರೆ ದೇವರನ್ನೇ ಬೇಡುವೆ ಎಂಬುವ ಪ್ರಾರ್ಥನೆ. ಇವುಗಳು ಉನ್ನತಿಯನ್ನೇ ತಂದೊದಗಿಸುತ್ತವೆ.
ಶ್ರದ್ಧಾ ರಹಿತ ಪ್ರಾರ್ಥನೆ ಸ್ಟ್ಯಾಂಪ ಇಲ್ಲದ ಪತ್ರ.
ಭಕ್ತಿರಹಿತ ಪ್ರಾರ್ಥನೆ ವಿಳಾಸವಿಲ್ಲದ ಪತ್ರ.
ಮೋಸ, ಅನ್ಯಾಗಳೊಂಗೊಂಡ ಪ್ರಾರ್ಥನೆ ಬೇರೆಯವರ ವಿಳಾಸ ಬರದಂತೆ.
ಅನನ್ಯಗತಿಕವಾದ ಭಕ್ತಿ ಶ್ರದ್ಧಾಗಳಿಂದ ಮಾಡಿದ ಪ್ರಾರ್ಥನೆ WhatsApp ಇದ್ದ ಹಾಗೆ ತತ್ಕ್ಷಣಕ್ಕೆ repley ಸಿಗತ್ತೆ :) 😊😉
*✍🏽✍🏽✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments