ಶ್ರೀ ಶ್ರೀ ಪದ್ಮನಾಭತೀರ್ಥರು

*ಶ್ರೀ ಶ್ರೀ ಪದ್ಮನಾಭತೀರ್ಥರು*


ಶ್ರೀಮಧ್ವಸಂಸೇವನ ಲಬ್ಧಶುದ್ಧವಿದ್ಯಾ-
ಸುಧಾಂಭೋ ನಿಧಯೋ ಅಮಲಾ ಯೇ |
ಕೃಪಾಲವಃ ಪಂಕಜನಾಭತೀರ್ಥಾಃ
ಕೃಪಾಲವಃ ಸ್ಯಾನ್ಮಯಿ ನಿತ್ಯಮೇಷಾಮ್ ||

ಶ್ರೀಶ್ರೀ ಪದ್ಮನಾಭತೀರ್ಥರ ದಿವ್ಯ ಮಧ್ಯ ಆರಾಧನಾಹೋತ್ಸವ. 

ಶ್ರೀಮದಾಚಾರ್ಯರ ನೆಚ್ಚಿನ ಶಿಷ್ಯರು ಉಡುಪಿಯ ಅಷ್ಟಮಠಾಧೀಶರುಗಳು ಮತ್ತು ಪದ್ಮನಾಭತೀರ್ಥರು ನರಹರಿತೀರ್ಥರು ಮಾಧವತೀರ್ಥರು ಹಾಗೂ ಅಕ್ಷೋಭ್ಯತೀರ್ಥರು ಹೀಗೆ ಹನ್ನೆರಡು ಜನ. 

ಈ ಎಲ್ಲರಿಗೂ ಒಂದೊಂದು ಉತ್ಕೃಷ್ಟ ಜವಾಬ್ದಾರಿಗಳನ್ನಿ ಶ್ರೀಮದಾಚಾರ್ಯರು ವಹಿಸಿಕೊಡುತ್ತಾರೆ. ೧)ಅಷ್ಟ ಮಠಾಧೀಶರುಗಳಿಗೆ ನಿರಂತರ ಕೃಷ್ಣನ ಆರಾಧನೆಯನ್ನು ವಹಿಸಿಕೊಡುತ್ತಾರೆ. ೨) ನರಹರಿ ತೀರ್ಥರಿಗೆ ಶ್ರೀಮನ್ಮೂಲರಾಮ ಸೀತಾದೇವಿಯರನ್ನು ತರಲು ಆದೇಶಿಸುತ್ತಾರೆ. ೩) ಮಾಧವತೀರ್ಥರಿಗೆ ದೇಶದುಗ್ವಿಜಯ ಮಾಡಿ ನಮ್ಮ ಸಿದ್ಧಾಂತ ಸ್ಥಾಪನೆಯ ಜವಾಬ್ದಾರಿ ಕೊಟ್ಟರೆ, ೪) ಅಕ್ಷೋಭ್ಯತೀರ್ಥರಿಗೆ ಅನಾದಿ ಭವ್ಯ ಪರಂಪರೆಗೆ ಅತ್ಯುತ್ತಮ ಉತ್ತಾರಾಧಿಕಾರಿಯನ್ನು ತಂದು ಕೂಡಿಸುವ ದೊಡ್ಡ ಜವಾಬ್ದಾರಿಗಳನ್ನು ವಹಿಸುತ್ತಾರೆ. ಈ ಎಲ್ಲರೂ ಆ ಕಾರ್ಯದಲ್ಲಿ ಯಶಸ್ವಿಗಳೂ ಆಗುತ್ತಾರೆ. 

ಈ ಎಲ್ಲ ಮಹನೀಯರುಗಳ ಮೇಲೆ, ಇಂದಿನ ಕಥಾನಾಯಕರಾದ ಶ್ರಿ ಶ್ರೀ ಪದ್ಮನಾಭತೀರ್ಥರಿಗೆ *ಯಃ ಕರ್ನಾಟಕ ಪೂರ್ವಸಜ್ಜನ ಗುರುಃ* ಎಂದೇ ಮುಂದಿನ ಜನಾಂಗ ಹೇಳುವಂತೆ ಸಮಗ್ರ ದೇಶದ ಸಕಲ‌ಮಾಧ್ವ ಪೀಠಾಧಿಪತಿಗಳಿಗೆ ಹಾಗೂ ಸಕಲ ವೈಷ್ಣರಿಗೆ  *ಜಗದ್ಗುರುಗಳನ್ನಾಗಿ* ನಿಯಮಿಸುತ್ತಾರೆ. ಅಂತೆಯೇ ಶ್ರೀ ಪದ್ಮನಾಭತೀರ್ಥರು ಎಲ್ಲ ಪೀಠಾಧಿಪತಿಗಳನ್ನೂ ಸಾಕಿ ಸಲಹಿ ಪೋಷಣೆ ಮಾಡುತ್ತಾರೆ. ಇದೊಂದು ದಿವ್ಯ ಮಹಿಮೆಯೇ... 

*ಭಾಷ್ಯವೇ ಶ್ವಾಸ* 

ಶ್ರೀ ಶ್ರೀ ಪದ್ಮನಾತೀರ್ಥ ಶ್ರೀಪಾದಂಗಳವರಿಗೆ ಶ್ರೀಮದಾಚಾರ್ಯರು ರಚಿಸಿದ *ಬ್ರಹ್ಮಸೂತ್ರಭಾಷ್ಯವೇ ಮೊದಲ ಉಸಿರಾಗಿತ್ತು* ಎಂದರೆ ತಪ್ಪಾಗದು. ಎರಡನೆ ಉಸಿರು ತಮ್ಮ ಉಸಿರು. ಅಂತೆಯೇ ನಿರಂತರ ಅಧ್ಯಯನ, ಸಿದ್ಧಾಂತ ಸ್ಥಾಪನೆ ಮಾಡಿ....  ಸೂತ್ರಾರ್ಥಗಳನ್ಮೊಳಗೊಂಡ, ಭಾಷ್ಯವ್ಯಾಖ್ಯಾನ ರೂಪವಾದ, ಅನೇಕ ಯುಕ್ತಿಗಳಿಂದ ಕೂಡಿದ, ಕೋಟಿ ಕೋಟಿ ಪ್ರಮೇಯಗಳ ಆಗರವಾದ, ಸಿದ್ಧಾಂತ ಸ್ಥಾಪಕವೂ ಆದ ಒಂದದ್ಭುತವಾದ *ತತ್ವಪ್ರದೀಪ*  ಎಂಬ ಮೊಟ್ಟ ಮೊದಲ ಟೀಕಾಗ್ರಂಥವನ್ನು ರಚಿಸಿಕೊಟ್ಟರು. ಜೊತೆಗೆ *ಸನ್ಯಾಯ ರತ್ನಾವಲಿ* ಎಂಬ ಉದ್ಗ್ರಂಥವನ್ನೂ ಅನುಗ್ರಹಿಸಿದರು. ಅಂತೆಯೇ ಮೊಟ್ಟ ಮೊದಲ ಟೀಕಾಕಾರರು *ಆದಿ ಟೀಕಾಕಾರರು - ಪ್ರಾಚೀನ ಟೀಕಾಕಾರರು* ಎಂದೇ ಪ್ರಸಿದ್ಧರಾದರು. 

ಶ್ರೀ ಪದ್ಮನಾತೀರ್ಥಶ್ರೀಪಾದಂಗಳವರ ಕರುಣೆ ಕೃಪೆ ಅತ್ಯದ್ಭುತ. ಸಮಗ್ರ ಮಾಧ್ವ ವೈಷ್ಣವ ಸಿದ್ಧಾಂತದ ಭವ್ಯ ಪ್ರತಿಷ್ಠಾಪನಾಚಾರ್ಯರರಾದ ಶ್ರೀಮಟ್ಟೀಕಾಕೃತ್ಪದರೇ ಕೊಂಡಾಡುತ್ತಾರೆ *ಕೃಪಾಲವಃ ಪಂಕಜನಾಭ ತೀರ್ಥಾಃ*  ಎಂದು.  ಅಷ್ಟೇ ಅಲ್ಲದೆ ನನ್ನ ಮೇಲೇ ವಿಶೇಷವಾದ ಕೃಪೆಯೂ ಮಾಡಲಿ ಎಂದೂ ಪ್ರಾರ್ಥಿಸಿ, ಸೂತ್ರಭಾಷ್ಯದ ಟೀಕೆಯಾದ *ತತ್ವಪ್ರಕಾಶಿಕಾ* ಗ್ರಂಥವನ್ನು ಆರಂಭಿಸುತ್ತಾರೆ.

*ವಿರಕ್ತ ಶಿಖಾಮಣಿಗಳು*

ಮೊಟ್ಟ ಮೊದಲ ಶಿಷ್ಯರಾದ ಶ್ರೀಪದ್ಮನಾಭತೀರ್ಥ ಶ್ರೀಪಾದಂಗಳವರ ದೊಡ್ಡ ಜವಾಬ್ದಾರಿ ಎಂದರೆ ಶ್ರೀಮದಾಚಾರ್ಯರು ಏನೆಲ್ಲ ಆದೇಶಿಸಿದ್ದಾರೆ ಅದೆಲ್ಲದ ಅಚ್ಚುಕಟ್ಟಾದ ಪಾಲನೆ ಆಗಲೇ ಬೇಕು. ಸ್ವಲ್ಪದರಲ್ಲಿ ಎಡವಟ್ಟಾದರೂ ಮುಂದಿನ ಎಲ್ಲ ಪೀಳಿಗೆಯೂ ಅದನ್ನೇ ಅನುಸರಿಸುತ್ತಾರೆ. ಯಾವದರಲ್ಲಿಯೂ ಹಿಂದುಮುಂದಾಗದಂತೆ ನೋಡಿಕೊಂಡು ಹೋಗಬೇಕು. 

ಶ್ರೀಮದಾಚಾರ್ಯರು ನಿರ್ದೇಶಿಸಿದ ಕೋಟಿ ಕೋಟಿ ಗುಣಗಳಲ್ಲಿ ವೈರಾಗ್ಯವೂ ಪ್ರಧಾನವಾದದ್ದು. ವೈರಾಗ್ಯ ಈ ಪ್ರಥದ ಸಂಪ್ರದಾಯದ ದೊಡ್ಡ ಗುಣವೆಂದಾಯ್ತು. ಸ್ಪರ್ಷ, ದೃಷ್ಟಿ, ನೋಟ, ಶ್ರವಣ, ಮಾತು, ಆಹಾರ, ವಿಹಾರ ಎಲ್ಲದರಲ್ಲಿಯೂ *ವೈರಾಗ್ಯವೇ ಭಾಗ್ಯ* ಎಂದು  ನಂಬಿದವರಿಗೆ ಒಲಿದು ಬರುವಂತಹದ್ದು. ಇದುವೇ ಶ್ರೀಮದಚಾರ್ಯರು ಆದೇಶಿಸಿರುವಂತಹದ್ದು. ಅಂತೆಯೇ ಮಳಖೇಡ ನಿವಾಸಿಗಳಾದ, ಶ್ರೀಮಟ್ಟೀಕಾಕೃತ್ಪಾದರು *ವೈರಾಗ್ಯಭಾಗ್ಯೋ ಮಮ ಪದ್ಮನಾಭತೀರ್ಥಾಂಬುಧಿಃ* ನನ್ನ ಪಾಲಿನ *ವೈರಾಗ್ಯ ಭಾಗ್ಯ ಎಂದರೆ ಶ್ರೀಪದ್ಮನಾಭತೀರ್ಥರು* ಎಂದು ಶ್ರೀಮನ್ಯಾಸುಧಾ ಆರಂಭದಲ್ಲಿ ಶ್ರೀಪದ್ಮನಾಭತೀರ್ಥರಿಗೆ ನಮಸ್ಕರಿಸುತ್ತಾರೆ. 

ನರಹರಿ ತೀರ್ಥರು ಶ್ರೀಮಟ್ಟೀಕಾಕೃತ್ಪಾದರಿಂದ ಆರಂಭಿಸಿ ಇಂದಿನ ಮುಕ್ತಿಯೋಗ್ಯ ಜೀವನ ವರೆಗೆ ಎಲ್ಲರಿಗೂ ಗುರುಗಳು ಶ್ರೀಪದ್ಮನಾಭತೀರ್ಥರು. ಜ್ಙಾನ ವೈರಾಗ್ಯ ಭಕ್ತಿ ಮೊದಲಾದ ಕೋಟಿ ಕೋಟಿ ಗುಣಪ್ರದರು ಶ್ರೀಪದ್ಮನಾಭತೀರ್ಥರು. ಈ ಮಹಾಗುರುಗಳನ್ನು ನಿರ್ಮಲ ಶುದ್ಧ ಮನಸ್ಸಿನಿಂದ ಸ್ಮರಿಸೋಣ ಆರಾಧಿಸೋಣ. ಚರಮಶ್ಲೋಕವನ್ನು ಪಾಠಿಸೋಣ.......

*✍🏽✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*