*ಪದ್ಮನಾಭತೀರ್ಥರ ಆರಾಧನೆ...*
*ಪದ್ಮನಾಭತೀರ್ಥರ ಆರಾಧನೆ...*
ಪೂರ್ಣಪ್ರಜ್ಙಕೃತಂ ಭಾಷ್ಯಂ
ಆದೌ ತದ್ಭಾವ ಪೂರ್ವಕಮ್ |
ಯೋ ವ್ಯಾಕರೋನ್ನಮಸ್ತಸ್ಮೈ
ಪದ್ಮನಾಭಾಖ್ಯ ಯೋಗಿನೆ ||
ಮಹಾ ಜ್ಙಾನಿಗಳು, ದೇವಾಂಶ ಸಂಭೂತರು, ವಾದಿಮಾರ್ತಾಂಡರು ಶ್ರೀ ಪದ್ಮನಾಭತೀರ್ಥರು.
ಸಮಗ್ರ ವೇದ ವೇದಾರ್ಥಗಳ ಜ್ಙಾನವನ್ನು ತಿಳಿದಿಕೊಂಡವರು, ಸಕಲ ಶಾಸ್ತ್ರಾರ್ಥ ಪ್ರವೀಣರು, ಅದ್ವೈತದಲ್ಲಿ ನಿಷ್ಣಾತರೂ, ಪ್ರಚಂಡ ಬುದ್ಧಿವಂತರು, ಮಹಾನ್ ವಿದ್ವಾಂಸರೂ ಆದವರು ಶೋಭನಭಟ್ಟರು.
ವಾಯುದೇವರ ಅವತಾರಿಗಳಾದ, ಕರುಣಾಳುಗಳಾದ, ನಮ್ಮ ಉದ್ಧಾರಕ್ಕಾಗಿಯೇ ಭುವಿಗಿಳಿದು ಬಂದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ಅನೆಕ ಗ್ರಂಥಗಳನ್ಬು ರಚಿಸಿ ವಾದಿಗಳನ್ನು ನಿಗ್ರಹಿಸಿ ಅನುಗ್ರಹಿಸಿದರು.
ಮೂವತ್ತಾರು ಸರ್ವಮೂಲ ಗ್ರಂಥಗಳಲ್ಲಿ ಗ್ರಂಥ ರಾಜ *ಸೂತ್ರಭಾಷ್ಯ* ವೇ. ಶ್ರೀವೇದವ್ಯಾಸರಿಂದ ರಚಿತವಾದ ಬ್ರಹ್ಮಸೂತ್ರಗಳಿಗೆ ಇರುವ ಇಪ್ಪತ್ತೊಂದು ಕುಭಾಷ್ಯಗಳನ್ನು ಖಂಡಿಸಿ *ಬ್ರಹ್ಮಸೂತ್ರಭಾಷ್ಯ* ವನ್ನು ರಚಿಸಿ, ಅನಾದಿ ಸತ್ಸಂಪ್ರದಾಯ ಪರಂಪರಾಪ್ರಾಪ್ತ ಶ್ರೀಮದ್ವೈಷ್ಣವ ಸಿದ್ಧಾಂತ ಪ್ರತಿಷ್ಠಾಪನೆಯನ್ನು ಮಾಡುತ್ತಾ ದೇಶ ದಿಗ್ವಿಜಯ ಮಾಡುತ್ತಿರುತ್ತಾರೆ.
*ಪೀಠೇ ರತ್ನೋಪಕ್ಲೃಪ್ತೇ* ಎಂದು ಹೇಳಿದಂತೆ ಎತ್ತರದ ಸಿಂಹಾಸನದಲ್ಲಿ ಶ್ರೀಮದಾಚಾರ್ಯರು ಆಸೀನರಾಗಿದ್ದಾರೆ. *ವೈದಿಕಾದ್ಯಾ ಹಿ ವಿದ್ಯಾಃ ಸೇವಂತೆ ರಮಂತೇ* ಎಂದು ಸಾರಿದಂತೆ ಅನೇಕ ಮಹಾನ್ ಜ್ಙಾನಿಗಳೂ ಆದ,ದೇವಾಂಶ ಸಂಭೂತರೂ ಆದ ವಿದ್ವಾಂಸರೆಲ್ಲರೂ ಭಾಗವಹಿಸಿದ್ದಾರೆ. ಅದೊಂದು ದಿವ್ಯವಾದ ಸಭೆ. ಆ ಸಭೆಗೆ ಶೋಭನ ಭಟ್ಟರ ಆಗಮನವಾಗುತ್ತದೆ. ವಿರಾಟ್ ಚಕ್ರವರ್ತಿಗಳಾಗಿ ಆಸೀನರಾದ ಜ್ಙಾಸೂರ್ಯರಂತೆ ಕಂಗೋಳಿಸುವ ಶ್ರೀಮದಾಚಾರ್ಯರನ್ನು ಕಂಡ ಕ್ಷಣಕ್ಕೇನೆ *ಪೂರ್ಣಸಂಖ್ಯಮನಮನ್ ಮುಹುರ್ಮದಾ* ಅತ್ಯಂತ ಹರ್ಷದಿಂದ ತಲೆ ಬಾಗಿತು. ಶಿರಬಾಗಿ ಸಾಷ್ಟಾಂಗ ನಮಸ್ಕಾರವನ್ನು ಮಾಡಿಯೇಬಿಟ್ಟರು.
ಶ್ರೀಮದಾಚಾರ್ಯರು ತಾವು ರಚಿಸಿದ ದಿವ್ಯವಾದ *ಕೈವಲ್ಯಾದ್ಯಖಿಲ ಸಾಧನಾ ಸಿದ್ಧಿ* ರೂಪವಾದ, *ಬಾಲಸಂಘಮಪಿ ಬೋಧಯದ್ಭೃಶಂ ದುರ್ನಿಪವಚನಂ ಚ ಪಂಡಿತೈಃ* ಗರುಡ ಶೇಷ ರುದ್ರಾದಿ ದೇವತೆಗಳಿಗೂ ಅಗಮ್ಯವಾದ, ಮುಕ್ತಿಯೋಗ್ಯರಾದ ಅತಿಪುಟ್ಟ ಜೀವನಿಗೂ ಅರ್ಥವಾಗುವ, ಅನಂತ ಅರ್ಥಗಳಿಂದ ಒಳಗೊಂಡ, ಸಕಲ ಶಾಸ್ತ್ರಾರ್ಥ ನಿರ್ಣಾಯಕವಾದ, *ಬ್ರಹ್ಮಸೂತ್ರಭಾಷ್ಯ* ದ ಅನುವಾದ ಭರದಿಂದ ಸಾಗ್ತಾ ಇದೆ. ವಾಕ್ಯಾರ್ಥ ಚರ್ಚೆಗಳು ನಡೀತಾ ಇವೆ. ಆ ವಾಕ್ಯಾರ್ಥಗಳಲ್ಲಿ ಈ ಶೋಭನ ಭಟ್ಟರೂ ಪಾಲ್ಗೊಳ್ಳುತ್ತಾರೆ.
ಅನೇಕ ಸಭೆಗಳಲ್ಲಿ ಭಾಗವಹಿಸಿ ಶ್ರೀಮದಾಚಾರ್ಯರಿಂದ ನೇರವಾಗಿ ಭಾಷ್ಯ ಶ್ರವಣ ಮಾಡಿದ ಶೋಭನ ಭಟ್ಟರಿಗೆ "ನಾನು ಇಲ್ಲಿಯ ವರೆಗೆ ತಿಳಿದ ಶಾಸ್ತ್ರ ಜ್ಙಾನ ಎಲ್ಲವೂ ಅಸಾರ, ಶ್ರೀಮದಾಚಾರ್ಯರ ದ್ವೈತ ಸಿದ್ಧಾಂತವೇ ಸಿದ್ಧಾಂತ" ಎಂದು ಪೂರ್ಣವಾಗಿ ಮನವರೆಕೆ ಆಗುತ್ತದೆ. ಅಂದಿನಿಂದ ಶ್ರೀಮದಾಚಾರ್ಯರ ನೆಚ್ಚಿನ ಮೆಚ್ಚಿನ ಅತ್ಯಂತ ಆಪ್ತ ಶಿಷ್ಯರಾಗಿ ಜೀವಿಸುತ್ತಾರೆ.
ನಾನಾವಿಧವಾದ ಕುಯುಕ್ತಿಗಳಿಂದ ಕೂಡಿದ ಜ್ಙಾವನ್ನು, ಶ್ರೀಮದಾಚಾರ್ಯರ ಭಾಷ್ಯವೆಂಬ ಸುಯುಕ್ತಿಗಳಿಂದ ಶೋಭನ ಭಟ್ಟರ ಮನ ನಿರ್ಮಲವಾಗ್ತಾ ಸಾಗಿತು. ಮೋಡದಲ್ಲಿ ಕವಿದು ಹೋದ ಚಂದ್ರ, ಮೋಡ ಸರಿದ ಮೇಲೇ ಹೇಗೆ ಶುದ್ಧವಾಗಿ ನಿರ್ಮಲನಾಗಿ ಕಾಣಬೇಕೋ, ನೀರಿನಿಂದ ಕಲಬೆರೆಕೆಯಾದ ಹಾಲು, ಹಂಸದ ಪ್ರಭಾವದಿಂದ ಶುದ್ಧವಾದ ಹಾಲು ಹೆಗೆ ದೊರೆಯಿತೋ ಹಾಗೆ ಶೋಭನ ಭಟ್ಟರ ಮನಸ್ಸು ನಿರ್ಮಲವಾಯಿತು.
*ಮೋಹಪೀತಲವಣೋದಕೋ ಮುಹುಃ ಪ್ರಾಕ್ಪಿಪಾಸುಃ ಅಮೃತಂ ಪಿಬನ್ನಿವ* ಉಪ್ಪು ನೀರೇ ಕುಡಿತಾ ಜೀವಿಸು ಮನುಜನಿಗೆ ಅಮೃತ ನೀಡಿದಾಗ, ಅಮೃತಕುಡಿದ ಮಾನವನ ಅವಸ್ಥೆ ಶೋಭನ ಭಟ್ಟರದ್ದು ಆಗಿತ್ತು. ಅಮೃತಸಿಕ್ಕಾಗ ಉಪ್ಪನೀರನ್ನು ಯಾರಾದರೂ ಬಯಸುತ್ತಾರೆಯಾ... ಹಾಗೇಯೇ ಶ್ರೀಮದಾಚಾರ್ಯರ ಭಾಷ್ಯಾಮೃತ ದೊರಕಿದಾಗ, ಹಿಂದೆ ತಿಳಿದ ಎಲ್ಲ ತತ್ವಗಳೂ ಉಪ್ಪು ನೀರಿಗೆ ಸಮ ಎಂದೇ ಭಾವಿಸಿ *ದ್ವೈತಸಿದ್ಧಾಂತವನ್ನು* ಒಪ್ಪಿಕೊಳ್ಳುತ್ತಾರೆ. ಮುಂದೆ ಗುರುಗಳಾಸ ಶ್ರೀಮದಾಚಾರ್ಯರಿಂದಲೇ ಸನ್ಯಾಸವನ್ನೂ ಪಡೆದು, *ಶ್ರೀಶ್ರಿ ಪದ್ಮನಾಭತೀರ್ಥರು* ಎಂದೇ ಪ್ರಸಿದ್ಧರಾಗುತ್ತಾರೆ.
ಶ್ರೀಪದ್ಮನಾತೀರ್ಥ ಶ್ರೀಪಾದಂಗಳವರ ಇನ್ನೂ ಅನೇಕ ಮಹಿಮೆಗಳಿವೆ, ಆ ಎಲ್ಲ ಮಹಿಮೆಗಳನ್ನು ಯಥಾಮತಿ ನಾಳೆ ಮತ್ತು ನಾಡದ್ದು ತಿಳಿಯುವ ಪ್ರಯತ್ನ ಮಾಡೋಣ. ಈ ಮೂರು ದಿನಗಳಲ್ಲಿ ಕನಿಷ್ಠ *ಸಾವಿರದೆಂಟು ಬಾರಿಯಾದರೂ ಅವರ ಚರ್ಮಶ್ಲೋಕವನ್ನು* ಈ ಲೇಖನ ತಲುಪಿದ ಓದಿದ ನಾವೆಲ್ಲರೂ ಜಪಿಸೋಣ. ಶ್ರೀಮದಾಚಾರ್ಯರ ಅತ್ಯಾಪ್ತಶಿಷ್ಯರ ಅನುಗ್ರಹಕ್ಕೆ ನಾವು ಪಾತ್ರರಾದರೆ, ಶ್ರೀಮದಾಚಾರ್ಯರು ಇನ್ನೂ ವಿಶೇಷವಾಗಿ ಅನುಗ್ರಹಿಸಿ *ತಮ್ಮ ಭಾಷ್ಯಾಮೃತವನ್ನು* ನಮಗೂ ಉಣಿಸುತ್ತಾರೆ.
*✍🏽✍🏽✍ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments