ಓ ಗುಣಪೂರ್ಣನೇ !! ಎನ್ನನು ಪೂರ್ಣನನ್ನಾಗಿಸು
*ಓ ಗುಣಪೂರ್ಣನೇ !! ಎನ್ನನು ಪೂರ್ಣನನ್ನಾಗಿಸು*
ಸ್ವಾಮಿಯಾದ ಶ್ರೀಹರಿ ಎನ್ನ ಬಿಂಬ. ನಾನು ಆತನ ಪ್ರತಿಬಿಂಬ. ಅನಂತಗುಣಪೂರ್ಣನಾದ ದೇವರ ಒಂದೊಂದು ಗುಣಗಳೂ ಸ್ವಯಂ ಬಿಂಬವಾಗಿವೆ. ಜಗತ್ತಿನ ತೃಣಮೊದಲು ಮಾಡಿ ಬ್ರಹ್ಮ ಲಕ್ಷ್ಮೀ ಪರ್ಯಂತ ಇರುವ ಎಲ್ಲ ಜೀವರ ಗುಣಗಳೂ ಭಗವದ್ಗುಣಗಳ ಪ್ರತಿಬಿಂಬವಾಗಿವೆ.
*ಏ ಏ ಗುಣಾನ್ ವಿಜಾನಂತಿ ತಾನ್ ತಾನ್ ಅವಿಶನ್ ಮರುತ್* ಎಂದು ತಿಲಿಸಿದಂತೆ ವಾಯುದೇವರ ಹಾಗೂ ದೇವರ ಯಾವೆಲ್ಲ ಗುಣಗಳನ್ನು ತಿಳಿದುಕೊಳ್ಳುತ್ತಾರೆಯೋ ಆ ಎಲ್ಲ ಗುಣಗಳಿಂದ ವಾಯುದೇವರು ಹಾಗೂ ದೇವರು ಉಬ್ಬರೂ ನಮ್ಮಲ್ಲಿ ಪ್ರವೇಶಿಸುತ್ತಾರೆ ಹಾಗೂ ಗುಣವಂತರನ್ನಾಗಿಸುತ್ತಾರೆ.
*ಸ್ವಾಮಿನ್ ನಿರ್ದೋಷ ಮದ್ದೋಷಾನ್ ವಿರೇಚಯ* ಎಂದು ಹೇಳಿದಂತೆ ನಿರ್ದುಷ್ಟನಾದ, ಯಾವ ದೋಷಗಳೂ ಇಲ್ಲದ ಭಗವಂತನೇ ನಮ್ಮ ದೋಷಗಳನ್ನು ಕಳೆದು ನಮ್ಮನ್ನೂ ನಿರ್ದುಷ್ಟನನ್ನಾಗಿ ಮಾಡುವ. ಹಾಗೆಯೇ....
*ಸ್ವಾಮಿನ್ !! ಗುಣಪೂರ್ಣ !!* ಗುಣಪೂರ್ಣನಾದ ಸರ್ವಸ್ವಾಮಿಯಾದ ನೀನೇ ನನ್ನನ್ನು, ನನ್ನ ಯೋಗ್ಯತಾನುಸಾವಾಗಿ ಗುಣಪೂರ್ಣನನ್ನಾಗಿಸಲು ಸಮರ್ಥ. ಅಂತೆಯೆ ನಿನಗೆ ದುಂಬಾಲು ಬಿದ್ದಿರುವೆ.
ಪ್ರತಿಬಿಂಬದಲ್ಲಿ ಪೂರ್ಣತೆ ಬರಬೇಕಾದರೆ ಕನ್ನಡಿ ಸ್ವಚ್ಛವಾಗಿರಬೇಕು. ಕನ್ನಡಿಯನ್ನು ಸ್ವಚ್ಛಗೊಳಿಸಬೇಕು. ನೀನು ಬಿಂಬ ನಾನು ಪ್ರತಿಬಿಂಬ. ನಿನ್ನ ಗುಣಗಳು ಬಿಂಬ, ಎನ್ನ ಗುಣಗಳು ಪ್ರತಿಬಿಂಬ. ನೀನು ನಿನ್ನ ಗುಣಗಳು ಪರಿಪೂರ್ಣ. ಆದರೆ ನಾನೋ ಅಥವಾ ನನ್ನ ಗುಣಗಳೋ ಅಪೂರ್ಣ. ನನ್ನ ಗುಣಗಳು ಪೂರ್ಣವಾಗಿ ಅಭಿವ್ಯಕ್ತಿಗೊಳ್ಳಲು ಕನ್ನಡಿಯಂತೆ ಇರುವ ಈ ದೇಹ ಮನಸ್ಸುಗಳು ಸ್ವಚ್ಛವಾಗಬೇಕು. ಸ್ವಚ್ಛಗೊಳಿಸಬೇಕು.
ಇಂದು ಮೋದಿಜಿ ಅವರಿಂದ *ಸ್ವಚ್ಛ ಭಾರತ* ಅಭಿಯಾನ ಆರಭವಾಗಿದೆ. ಆದರೆ ಅನಾದಿಯಿಂದ ಸ್ವಯಂ ನಾರಾಯಣನೇ ಬ್ರಹ್ಮಾದಿ ದೇವತಾ, ಋಷಿ ಮುನಿಗಳಿಂದ ಒಳಗೊಂಡ *ಸ್ವಚ್ಛ ಮನಸ್ಸು* ಎಂಬ ಅಭಿಯಾನ ಎಂದೊ ಅರಂಭ ಮಾಡಿಬಿಟ್ಟಿದ್ದಾನೆ.
*ಸ್ವಚ್ಛ ಮನಸ್ಸು* ಅಭಿಯಾನದ ಮೊದಲ ಹೆಜ್ಜೆ ಏಕಾದಶಿ ವ್ರತವಾದರೆ, ಮಧ್ಯ ಹೆಜ್ಜೆ ತತ್ತ್ವಜ್ಙಾನ, ಕೊನೆಯ ಹೆಜ್ಹೆ ಅಪರೋಕ್ಷ ಜ್ಙಾನ. ಮನಸ್ಸು ಸ್ವಚ್ಛವಾದರೆ ಪ್ರತಿಬಿಂಬ ಝಳ ಝಳವಾಗಿ ಪರಿಪೂರ್ಣವಾಗಿ ತೋರಿ ಬರುವ. ಸ್ವಚ್ಛ ಮನಸ್ಸಿನಲ್ಲಿಯೇ ಪೂರ್ಣಗುಣಗಳ ಅಭಿವ್ಯಕ್ತಿ. ಪೂರ್ಣಗುಣಗಳ ಅಭಿವ್ಯಕ್ತಿಯೇ ಜೀವನ ಪರಿಪೂರ್ಣತೆ.
ಏಕದಶಿ ವ್ರತದಿಂದಾರಂಭಿಸಿ, ಧರ್ಮ ಕರ್ಮ ಮಾಡಿಸಿ, ಜ್ಙಾನ ಅಭಿವೃದ್ಧಿಸಿ, ಭಕ್ತಿ ಬೆಳಿಸಿ, ಅಪರೋಕ್ಷ ಕೊಟ್ಟು ತನ್ನಂತೆಯೇ ಪೂರ್ಣನನ್ನಾಗಿ ಮಾಡುವವನು *ಅನಂತ ಗುಣಪೂರ್ಣನಾದ ಶ್ರೀಹರಿಯೇ.*
ಇಂದು ಮತ್ತು ನಾಳೆ ದೇಶ ಕಾಲಕ್ಕನುಗುಣವಾಗಿ ಕೆಲ ಕೆಲವರಿಗೆ *ವೈಕುಂಠ ಏಕಾದಶಿ* ಬಂದೊದಗಿದೆ. ಇಂದಿನಿಂದಲೇ ಪರಿಪೂರ್ಣತೆಗೆ ಮೊದಲ ಹೆಜ್ಜೆಯಾದ ಏಕಾದಶೀ ವ್ರತ ಆರಂಭಿಸೋಣ. ಪರಿಪೂರ್ಣಗೊಳಸಿವದು ಆ ದೇವನ ಹೆಗಲಿಗೆ ಹಾಕೋಣ...
*✍🏽✍🏽✍ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments