*ಇದ್ದಂತೆಯೇ ಒಪ್ಪಿಕೊಳ್ಳಬೇಕು.....*
*ಇದ್ದಂತೆಯೇ ಒಪ್ಪಿಕೊಳ್ಳಬೇಕು.....*
ಸಕ್ಕರೆಯನ್ನು ಸಿಹಿಯಾಗಿಯೇ, ಮೆಣಸಿನಕಾಯಿಯನ್ನು ಖಾರವಾಗಿಯೇ ಒಪ್ಪಿಕೊಳ್ಳಬೇಕು. ಸ್ವಭಾವಿಕವಾಗಿ ಸಿಹಿಯಾದ ಸಕ್ಕರೆಯನ್ನು ಖಾರವಾಗಿ ಮಾರ್ಪಾಡು ಮಾಡಲಾಗದು. ಅದೇರೀತಿಯಾಗಿ ಮೆಣಸಿನಕಾಯಿಯನ್ನೂ ಸಹ ಸಿಹಿಯಾಗಿ ಮಾಡಲಾಗದು. ಹಾಗೆಯೇ ಎದುರಿನ ವ್ಯಕ್ತಿಯನ್ನು ಇದ್ದ ಹಾಗೆಯೇ ಇರುತ್ತಾನೆ. ಅವರನ್ನು ಬದಲಾಯಿಸುವ ಪ್ರಯತ್ನ ಬೇಡ. ಬದಲಾವಣೆಯ ಅಪೇಕ್ಷೆ ಒಟ್ಟಾರೆಯಾಗಿ ಇಟ್ಟುಕೊಳ್ಳಲೂ ಬಾರದು. ಬದಲಾವಣೆಯ ಅಪೇಕ್ಷೆ ಇಟ್ಟುಕೊಳ್ಳುವದೂ ಎಂದರೆ ಮೆಣಸಿನಕಾಯಿಯನ್ನು ಸಕ್ಕರೆಯಂತೆ ಸಿಹಿ ಮಾಡುವ ಪ್ರಯತ್ನವಿದ್ದಂತೆಯೇ ಸರಿ.
ಪ್ರಾಕೃತಿಕವಾಗಿ ಇರುವ ವಸ್ತುವನ್ನು ಮಾರ್ಪಾಡುಮಾಡುವದಾಗಲಿ, ಬದಲು ಮಾಡುವ ಪ್ರಯತ್ನವಾಗಲಿ ನಮ್ಮದಾದರೆ, ಆ ಕಾರ್ಯದಲ್ಲಿ ನಾವು ಸೋಲುವದು ನಿಶ್ಚಿತ.
ಬದಲಾವಣೆಯ ಅಪೇಕ್ಷೆಯೇ ತಪ್ಪಾ ?? ಸರ್ವಥಾ ತಪ್ಪು ಅಲ್ಲ... *ಬದಲಾವಣೆಗಿಂತಲೂ ಹೊಂದಾಣಿಕೆ ತುಂಬ ಮಹತ್ವ.* ಬದಲಾವಣೆಗೆ ಪರರ ಅಹಂ ಬಗ್ಗಿಸಬೇಕು. ಹೊಂದಾಣಿಕೆಗೆ ನನ್ನ ಅಹಂ ಬಗ್ಗಿಸಬೇಕು. *ಇನ್ನೊಬ್ಬರ ಅಹಂ ಬಗ್ಗುಸುವದಕ್ಕಿಂತಲೂ, ನನ್ನ ಅಹಂ ನಾನು ಬಗ್ಗಿಸಿಕೊಳ್ಳುವದು ತುಂಬ ಸುಲಭ.*
ಮೆಣಸಿನಕಾಯಿಯನ್ನೇ ಸಿಹಿ ಮಾಡುವದಕ್ಕಿಂತಲೂ ಮೆಣಸಿನಕಾಯಿಯ ಜೊತೆ ಸಕ್ಕರೆ ಅಥವಾ ಬೆಲ್ಲವನ್ನು ಬೆರಿಸಿಬಿಟ್ಟರೆ, ಹೊಂದಾಣಿಕೆ ಮಾಡಿಕೊಂಡು ಬಿಟ್ಟರೆ ರುಚಿ ರುಚಿಯಾದ *ರಂಜಕ*ವನ್ನೇ ಜಗತ್ತಿಗೆ ಕೊಡಬಹುದು.
ಇದ್ದಂತೆ ಸ್ವೀಕರಿಸಿಬಿಟ್ಟರೆ ಅಲ್ಲಿ ವಿರಸ ಹುಟ್ಟಲಾರದು. ಸ್ನೇಹ ಉಳಿಸಿಕೊಂಡು ಬೆಳಿಸಿಕೊಳ್ಳುವ ಇರಾದೆ ಇದ್ದರೆ ಹೊಂದಾಣಿಕೆ ಮಾಡಿಕೊಳ್ಳುವದು ಲೇಸು. ಆಗ ಜವಾಬ್ದಾರಿ ಅವರ ಹೆಗಲ ಮೇಲೆ. ಅಹಂ ಸ್ವಭಾವದಿಂದ ಹೊಂದಾಣಿಕೆ ಮಾಡಿಕೊಳ್ಳದೇ ಇದ್ದರೆ ಖಾರವಾಗಿಯೇ ಉಳಿಯುತ್ತಾರೆ. ಅಹಂ ಬಗ್ಗಿಸಿಕೊಂಡು ಅವರೂ ಹೊಂದಾಣಿಕೆಗೆ ಮುಂದಾದರೆ ಸ್ನೇಹವನ್ನು ಜಗತ್ತಿಗೆ ಕೊಡುವ ಬಗೆಯನ್ನು ತೋರಿಸಿಕೊಟ್ಟಂತಾಗುತ್ತದೆ. ಬದಲಾವಣೆಯ ನಮ್ಮ ವಿಚಾರವೂ ಈಡೇರುತ್ತದೆ. *ಹೊಂದಾಣಿಕೆ ಮೊದಲು ನಮ್ಮನ್ನು ಬದಲಾಯಿಸುತ್ತದೆ, ನಂತರ ಎದುರಿನ ವ್ಯಕ್ತಿಯಲ್ಲಿಯೂ ಬದಲಾವಣೆ ತರುತ್ತದೆ.* ಇದು ಲೌಕಿಕವಾಗಿ ಯೋಚಿಸಿದರೆ... ಆಧ್ಯಾತ್ಮಿಕವಾಗಿಯೂ ಒನ್ನೋಟನೋಡಬಹುದು.....
*ಕರ್ಮಾನುಸಾರಿ ಫಲದಾತಾ* ಕರ್ಮಕ್ಕೆ ಅನುಗುಣವಾಗಿ ಫಲಪ್ರದ ಎಂಬುವದು ನಮ್ಮ ಸ್ವಾಮಿಯ ಸ್ವಭಾವ. ಅಂತಹ ದೇವರನ್ನೂ ಬದಲಾಯಿಸುವ ಪ್ರಯತ್ನ ಇಂದು ನಮ್ಮದಾಗಿದೆ. ಆ ದೇವರಿಗೆ ದೇವರ ನೀತಿ ನಿಯಮಗಳಿಗೆ ಹೊಂದಿಕೊಳ್ಳುವ ಯಾವ ಇರಾದೆಯೂ ನಮ್ಮಲ್ಲಿ ಇಲ್ಲವಾಗಿದೆ.
ಹಿಂದಿನ ಪಾಂಡವರಿಂದ ಆರಂಭಿಸಿ, ಅಥವಾ ಇನ್ನೂ ಹಿಂದಿನವರನ್ನೂ ಅರಂಭಿಸಿ ಎಲ್ಲ ಮಹಾತ್ಮರೂ ದೇವನನ್ನು ಇದ್ದಂತೆ ಸ್ವೀಕರಿಸದರು. ಅವನ ನೀತಿಗೆ ಹೊಂದಿಕೊಂಡರು. ತಾವೂ ಬದಲಾದರು, ದೇವರನ್ನೂ ಬದಲಾಯಿಸಿದರು. ತಾವು ಆತ್ಯಂತಿಕ ಸಂತೋಷ ಭರಿತರಾಗಿ ವೈಭವದ ಜೀವನ ಮಾಡಿದರು.
ಇಂದು ಕೇವಲ ದೇವರ ಬದಲಾವಣೆಯನ್ನು ಅಪೇಕ್ಷೆಪಡುತ್ತಿದ್ದೇವೆ, ಅದು ಎಂದಿಗೂ ಅಸಾಧ್ಯದ ಮಾತು. ದೇವರನ್ನು ಇದ್ದಂತೆ ಸ್ವೀಕರಿಸೋಣ. ನಂತರ ನಾವು ಬದಲಾಗಿ ದೇವರ ನೀತಿ ನಿಯಮಗಳಿಗೆ ಹೊಂದಿಕೊಳ್ಳೋಣ, ನಂತರ ದೇವನೂ ಬದಲಾಗಿ ಕರ್ಮಫಲದ ಪರಿಮಾಣವನ್ನು ಬದಲಾಯಿಸಿ ಸತ್ಫಲವಮ್ನು ಉಣಿಸಿ ಸುಖದಿಂದ ನಗು ನಗುತಾ ಇರುವಂತೆ ನೋಡಿಕೊಳ್ಳುತ್ತಾನೆ.
*✍🏻✍🙏🏼ನ್ಯಾಸ*
ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ.
Comments