*ಎದ್ದಕೂಡಲೆ ಮದುವೆಯ ಚಿಂತೆ .....*
*ಎದ್ದಕೂಡಲೆ ಮದುವೆಯ ಚಿಂತೆ .....*
ಅಸಾಮಾನ್ಯನಾದ ವ್ಯಕ್ತಿ, ಸಾಮಾನ್ಯವಾಗಿ ತಾನು ಸಾಮಾನ್ಯ ಎಂದೇ ನಾಲಕು ಜನರೆದುರಿಗೆ ಪ್ರತಿಬಿಬಿಸ್ತಾನೆ ತೋರಿಸುತ್ತಾನೆ. ಇದಕ್ಕೆ ದೇವರೂ ಹೊರತಲ್ಲ.
ನಿದ್ರೇಯೇ ಇಲ್ಲದ ಅಂತೆಯೇ *ನಿದ್ರಾರಹಿತ* ಎಂದೇ ಪ್ರಸಿದ್ಧನಾದ ದೇವ, ಸಾಮಾನ್ಯನ ಹಾಗೆ ತಾನೂ *ನಾಲಕು ತಿಂಗಳು ಮಲಗಿದ್ದ* ಎಂದೇ ಎಲ್ಲರಿಗೂ ತೋರಿಸುತ್ತಾನೆ.
ಸಾಮಾನ್ಯ ವ್ಯಕ್ತಿಯ ಅತಿ ದೊಡ್ಡ ಸಮಸ್ಯೆಗಳು ಎಂದರೆ ಒಂದು ಊಟದ ಚಿಂತೆ, ಇನ್ನೊಂದು ಮದುವೆಯ ಚಿಂತೆ. ದೇವರಿಗೊ ಈ ಎರಡರ ಸಮಸ್ಯೆಯೂ ಇಲ್ಲ. ಹಾಗಿದ್ದರೂ ಎರಡೂ ಕೆಲಸಗಳನ್ನೂ ಸಾಮಾನ್ಯರಂತೆ ಮಾಡಿ ತೋರಿಸುತ್ತಾನೆ.
ಶಯನೀ ಏಕಾದಶೀ ಆಷಾಢ ಶುಕ್ಲ ಏಕಾದಶಿಯ ದಿನ ಪುಣ್ಯಾತ್ಮ ಅಂದು ಮಲಗಿದ. ಎರಡು ತಿಂಗಳು ನಂತರ ಪರಿವರ್ತಿನೀ ಏಕಾದಶಿಯಂದು ಮಲಗಿದ ಭಂಗಿಯಿಂದ ಆ ಕಡೆ ಮೊರೆ ಮಾಡಿ ಮಲಗಿದ. ಮಲಗಿದ ದೇವರು ಏಳುವ ಮನಸ್ಸು ಮಾಡಿದಾಗ ಸರಿಯಾಗಿ ನೂರಿಪ್ಪತ್ತು ದಿನಗಳು ಕಳೆದವು. ಕಾರ್ತೀಕ ಮಾಸ ಉತ್ಥಾನ ದ್ವಾದಶಿಯಂದು ಎದ್ದ.
ಸಾಮಾನ್ಯ ಮನುಷ್ಯನ ಸ್ವಭಾವ, ಏಳುವದಕ್ಕೆನೇ ಹೊಟ್ಟೆ ಚಿಂತೆ. ಹಾಗೆಯೇ ತೋರಿಸಿದ ದೇವ ಎದ್ದ ಕೂಡಲೇ ಖಾರ, ಉಪ್ಪು, ಪಲ್ಯೆಗಳು, ಹಣ್ಣುಗಳು ಮೊದಲು ಮಾಡಿ ರುಚಿ ರುಚಿಯ ಪದಾರ್ಥಗಳನ್ನು ಬೆಳಿಗಿನ ಝಾವ ಏಳು ಗಂಟೆಯಾಗುವದರಲ್ಲೇ ಉಂಡುಬಿಟ್ಟ. ಹೊಟ್ಟೆ ತುಂಬಿದ ಮೇಲೆ *ಮದುವೆಯ ಚಿಂತೆ..*
ದ್ವಾದಶಿಯ ದಿನ ಏಳರೊಳಗೇ ಎದ್ದು ಊಟಮಾಡಿದ ಸ್ವಾಮಿ, ಸಾಯಂಕಾಲ ಏಳರೊಳಗೆ *ಲಕ್ಷ್ಮೀ ದೇವಿಯ ದಿವ್ಯ ಸಾನ್ನಿಧ್ಯದಿಂದ ಕೂಡಿದ ತುಳಸೀದೇವಿಯ ಜೊತೆಗೆ ಮದುವೆಯನ್ನೂ ಮಾಡಿಕೊಂಡ* ಹೀಗೆ ಸಾಮಾನ್ಯನಂತೆ ನಟಿಸುತ್ತಾನೆ ಅಸಾಮಾನ್ಯನಾದ ನಮ್ಮ ಸ್ವಾಮಿ ಶ್ರೀಹರಿ.
*ಶ್ರೀಹರಿಯ ನಟನೆಗಳು ಹೀಗೇಕೆ.. ???*
ವಿಭಜಿಸುವದು ದೇವರದೊಂದು ನಿಯಮ. ನಮ್ಮಂತಹ ಸಾಮಾನ್ಯರಲ್ಲಿ ದೇವನೂ ಒಬ್ಬ ಸಾಮಾನ್ಯ ಎಂದೇ ತಿಳಿಯುವವರು ಕೆಲವರು. ಅವರಿಗೆ ತಮಸ್ಸಿಗೆ ಕಳುಹಿಸಬೇಕು, ಇದು ಒಂದಾದರೆ... ಊಟ ಮದುವೆಯ ಚಿಂತೆಯನ್ನೇ ಮಾಡುವಂತಹ ಸಾಮಾನ್ಯ ಭಕ್ತರು ಮತ್ತೆ ಕೆಲವರು. ತಮ್ಮ ಊಟ ಮತ್ತು ಮದುವೆಗಳೆಂಬ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವದಕ್ಕಾಗಿ ನನ್ನನ್ನು ಈ ರೀತಿಯಾಗಿ ಚಿಂತಿಸಲಿ. ನನ್ನ ಈ ಬೆಳಗಿನ ಊಟ ಹಾಗೂ ಸಾಯಂಕಾಲದ ಮದುವೆಯ ಆಚರಣೆಯಿಂದ ತಮ್ಮ ಇಷ್ಟಾರ್ಥಗಳನ್ನು ಪಡೆದುಕೊಳ್ಳಲಿ. ಈ ಸಾಮಾನ್ಯ ಗುಂಪಿಗೆ ಸಂಸಾರ ಸುಖವನ್ನು ನಾನು ದಯಪಾಲಿಸುವೆನೆಂದು...
ಮೂರನೆಯದು "ಯಾರಿಂದಲೂ ಮಾಡಲು ಅಸಾಧ್ಯವಾದ ನಾಲಕು ತಿಂಗಳು ನಿದ್ರೆಯನ್ನು ಮಾಡುತ್ತಾನೆ ಎಂದರೆ ಇವನು ಸಾಮಾನ್ಯೇನಲ್ಲ-- ಅಸಮಾನ್ಯನೇ" ಎಂದು ಚಿಂತಿಸುವವರ ನಿದ್ರೆಯನ್ನೇ ಕತ್ತರಿಸಿ ಹಾಕುತ್ತೇನೆ. ನಿತ್ಯೌಷಧಿ ರೂಪಳಾದ, ದರ್ಶನಮಾತ್ರದಿಂದಲೇ ಪಾಕಳೆಯುವ, ಪುಣ್ಯಕೊಡುವ, ದೇವರು ಅತ್ಯಂತ ಪ್ರಿಯಳಾದ, ಲಕ್ಷ್ಮೀದೇವಿಯ ಅಪಾರ ಸಾನ್ನಿಧ್ಯವಿರುವ ತುಳಸೀದೇವಿಯೊಟ್ಟಿಗೆ ಮಾಡಿಕೊಂಡ ವಿವಾಹದ ಘಟನೆಯನ್ನು ಚಿಂತಿಸಿ, ಆ ತುಲಸೀದೇವಿಯನ್ನು ವಿವಾಹ ಮಾಡಿಕೊಟ್ಟರೆ... ಆ ಅಧಿಕಾರಿಯ ಪಾಪ ಕಳೆದು, ಸಂಸಾರ ರೋಗಕ್ಜೆ ಔಷಧಿ ತೋರಿಸಿ, ಪುಣ್ಯಕೊಟ್ಟು, *ಲಕ್ಷ್ಮೀದೇವಿಯಿಂದ ಅಭಿಮನ್ಯಮಾನವಾದ ಜ್ಙಾನ, ಮೋಕ್ಷಗಳ ಜೊತೆಗೇನೆ ವಿವಾಹ ಮಾಡಿಸಿ, ಅನಂತ ಅಪಾರ ಆನಂದದೊಳಗೆ ಇರಿಸುತ್ತೇನೆ.* ಹೀಗೆ ದೇವರ ವಿಚಾರ. ನಾನಾವಿಧದ ಜನರ ಯೋಚನೆಗೆ ನಾನಾ ತರಹ ತೋರಿ ನಾನಾ ತರಹದ ಫಲಗಳನ್ನು ಕೊಡುತ್ತಾನೆ.
ಸಾಮಾನ್ಯ ಮಾನವನಂತೆ ತೋರಿಸುವ ಮುಖಾಂತರ, ಅವರವರ ಚಿಂತೆಗಳನ್ನೂ ಅವರಿಗೆ ತೋರಿಸಿ, ಅವುಗಳನ್ನು ಅವವರ ಯೋಗ್ಯತಾನುಸಾರಿಯಾಗಿ ಪರಿಹರಿಸಿ, ಇಷ್ಟಾರ್ಥಗಳನ್ನು ಈಡೇರಿಸಿ ತಾನು ಮಾತ್ರ ಅಸಾಮಾನ್ಯನಾಗಿ ಉಳಿಯುತ್ತಾನೆ. ಇದುವೇ ನಮ್ಮ ಶ್ರೀಹರಿಯ ಒಂದು ದಿವ್ಯ ವೈಭವ.
ಇಂದು ಏಕಾದಶೀ...
ಉಪವಾಸ ಮಾಡಲೇಬೇಕು. ತಾವೆಲ್ಲರೂ ಮಾಡುತ್ತೀರಿ. ಸಂಶಯವೇ ಇಲ್ಲ.
ಈ ಉಪವಾಸ.....
*ಅತ್ಯಂತ ಮುಖ್ಯವಾಗಿ ದೇವರ ಪ್ರೀಗೋಸ್ಕರವೇ.* ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು *ಸತ್ಯಾಗ್ರಹವೆಂದಾದರೂ* ಉಪವಾಸ ಮಾಡೋಣ. ಆರೋಗ್ಯ ದೃಷ್ಟಿಯಿಂದಲೂ ಅತ್ಯುತ್ತಮ. ದೇವರ ಮಾತು ಕೇಳಿದ ಸೌಭಾಗ್ಯ. ಧರ್ಮ ರಕ್ಷಣೆ ಮಾಡಿದ ಭಾಗ್ಯ. ಅನಾದಿ ಸತ್ಸಂಪ್ರದಾಯ ಉಳಿಸುವ ಹೊಣೆಗಾರಿಕೆ. ಮುಂದಿನ ನಮ್ಮ ಜನರಿಗೆ ಆದರ್ಶ. ಹೀಗೆ ಯಾವ ದೃಷ್ಟಿಯಿಂದಲಾದರೂ ಇಂದಿನ ದಿನ *ಉಪವಾಸ* ಮಾಡುವದನ್ನು ತಪ್ಪಿಸುವದು ಬೇಡವೇ ಬೇಡ..... ಇಂದು ನಾವು ಮಾಡದೇ ಇದ್ದರೆ ಮುಂನ ನಮ್ಮಮಕ್ಕಳು ಮೊಮ್ಮಕ್ಕಳು ಮಾಡುವದೇ ಇಲ್ಲ ಇದು ನೂರಕ್ಕೆ ನೂರಷ್ಟು ಖಚಿತ.....
*✍🏽✍🏽✍🏽ನ್ಯಾಸ*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments