*ದೀಪಾವಳೀ ಅಮಾವಾಸ್ಯೆ -- ಲಕ್ಷ್ಮೀಪೂಜೆ*


*ದೀಪಾವಳೀ ಅಮಾವಾಸ್ಯೆ -- ಲಕ್ಷ್ಮೀಪೂಜೆ*

ಪೂಜೆ ಸಾಮಾನ್ಯ ನಿಯಮ ಪೂಜ್ಯನಾದ ವ್ಯಕ್ತಿಯನ್ನು ಕೇಂದ್ರೀಕೃತರನ್ನಾಗಿ ಮಾಡಿ, ಅವರನ್ನು ಸಂತೋಷಪಡಿಸುವದು.  ಆದರೆ ಇಂದಿನ ಪ್ರಸಂಗ ತುಂಬ ವಿಚಿತ್ರ "ಪೂಜ್ಯರಾದವರು ಎಷ್ಟು ಕೇಂದ್ರಿಕೃತರಾಗಿರುತ್ತಾರೋ ಇಲ್ಲೊ ಗೊತ್ತಿಲ್ಲ, ಪೂಜೆ ಮಾಡುವ ನಾವಂತೂ ಪರಿಪೂರ್ಣ ಕೇಂದ್ರರಾಗಿರುತ್ತೇವೆ" ಇದು ಸ್ಪಷ್ಟ.

ಪೂಜೆ ಮಾಡುವವರು ಯಾರು ನಾನು, ಪೂಜೆಗೆ ವೈಭವ ಬರುವದೇ ನನ್ನ ಆಭರಣಗಳಿಂದ, ಪೂಜೆ ಯಾರಿಗೋಸ್ಕರ ನನಗೋಸ್ಕರ, ಹೀಗೆ ಪೂಜೆಯ ಎಲ್ಲ ಅವಧಿಯೂ *ನಾನು ನನ್ನದು ನನಗೆ* ಎಂಬುವಂತಾಗಿದೆ.

ಇಂದಿನ ಪೂಜೆ ಲಕ್ಷ್ಮೀದೇವಿಯನ್ನೇ ಸಂತೋಷ ಪಡಿಸಲು ಆಗದಿದ್ದರೂ, ಲಕ್ಷ್ಮೀದೇವಿಯನ್ನೇ ಕೇಂದ್ರಳನ್ನಾಗಿ ಮಾಡದಿದ್ದರೂ ಕನಿಷ್ಠ ಅವಳನ್ನೂ ಸಂತೋಷಪಡಿಸುವ, ಲಕ್ಷ್ಮೀದೇವಿಯೂ ಕೇಂದ್ರಳಾಗಿ ಇರುವಂತೆ ಪೂಜೆ ಮಾಡೋಣ....

*ಧ್ಯಾನ*

*ನಿತ್ಯಮುಕ್ತಳು ನೀನು.* ಎಂದು ತಿಳಿದವರಿಗೆ ಮುಕ್ತಿಯನ್ನು ಕೊಡುತ್ತಾಳೆ....
*ನಿರ್ವಿಕಾರಳು ನೀನು* ಎಂದು ಚಿಂತಿಸಿದರೆ ಪ್ರಕೃತಿಯ ಯಾವವಿಕಾರವೂ ನಮ್ಮ ಮೇಲಾಗದಿರುವಂತೆ ನೋಡಿಕೊಳ್ಳುತ್ತಾಳೆ.
*ನಿತ್ಯಸುಖ ಸಂಪೂರ್ಣೆ* ಎಂದು ಭಾವಿಸಿದರೆ ಸುಖದ ಸಮುದ್ರದಲ್ಲಿ ಲೋಲಾಡಿಸುತ್ತಾಳೆ.
*ಭೃತ್ಯವತ್ಸಲೆ* ಎಂದು ಯೋಚಿಸಿದರೆ ಎಂತಹ ಕಠಿಣ ಸ್ಥಿತಿಯಲ್ಲಿ ಇದ್ದರೂ ವಾತ್ಸಲ್ಯತೋರಿ ಸಂರಕ್ಷಿಸುತ್ತಾಳೆ.
*ಪುರುಷೋತ್ತಮನ ವಕ್ಷೋ ನಿವಾಸಿನಿ* ಎಂದೇ ಧೇನಿಸಿದರೆ ಪುರೋತ್ತಮನ ಅಡೆದಾವರೆಗಳಲ್ಲಿ ಎನ್ನನು ಸ್ಥಾಪಿಸುತ್ತಾಳೆ. ಹೀಗೆ ನಾನಾಗುಣಗಳಿಂದ  ಲಕ್ಷ್ಮೀದೇವಿಯನ್ನು ಚಿಂತಿಸೋಣ. ಇದರಿಂದ ಅವಳೂ ಸಂತುಷ್ಟಳಾಗುವವಳು, ನನಗೂ ಲಾಭವಿದೆ.

*ಪ್ರಾರ್ಥನೆ*

*ಯಥಾ ವೈಕುಂಠ ನಗರೆ, ಯಥಾ ವೈ ಕ್ಷೀರ ಸಾಗರೆ.
ತಥಾ ಮದ್ಭವನೇ ತಿಷ್ಠ ಚಿರಂ ಶ್ರೀವಿಷ್ಣುನಾ ಸಹ.

ಅನಂತಾಸನ, ಶ್ವೇತದ್ವೀಪ,ವೈಕುಂಠುದಲ್ಲಿ ನಾರಾಯಣನೊಟ್ಟಿಗೆ ಕ್ಷಣಬಿಡದೇ ನೀನು ವಾಸ ಮಾಡಿದ್ದೀಯಲ್ಲ, ಅದೇ ರೀತಿ ನಮ್ಮ ಮನೆಯಲ್ಲಿ ಯಾಕಿರಬಾರದು... ದಯಮಾಡಿ ನನ್ನ ಮನೆಗೆ ಬಂದು ವಾಸಮಾಡೇ...

ಲಕ್ಷ್ಮೀದೇವಿ ನನ್ನ ಮನೆಗೆ ಬಂದು ವಾಸ ಮಾಡುವದರಿಂದ ಲಾಭವೇನು.. ?? ನನ್ನ ಮನೆ ವೈಕುಂಠವೇ ಆಗುತ್ತದೆ. ಆಗ ಪಡೆಯುವದು, ಕಳೆದುಕೊಳ್ಳುವದು, ಪಡೆಯುವದರ ಚಿಂತೆ, ಕಳೆದುಕೊಂಡದ್ದರ ದುಃಖ,  ಇದ್ಯಾವದೂ ಇರುವದೇ ಇಲ್ಲ.

*ಸುವರ್ಣವೃದ್ಧಿಂ ಕುರು ಮೇ ಗೃಹೇ ಶ್ರೀಃ*

ಭಂಗಾರದ ವೃದ್ಧಿಯ ಮಳೆಗೆರಸು ಅಂತ ನಾವು ಬೇಡುತ್ತೇವೆ. ತೊಗೊಂಡು ಏನು ಮಾಡುವದಿದೆ. ಭಂಗಾರವೆಲ್ಲ ಬಾಂಕಿನಪಾಲು ಆಗಿರತ್ತೆ. ಪಾಲಿಸ್ಟರ್ ಶರ್ಟ ಹಾಕ್ಕೊಳ್ಳೊದೇ ನನ್ನ ಹಣೆಬರಹವಾಗಿರುತ್ತದೆ. ಹಾಗಾಗದೇ

*ಸು ವರ್ಣ* ಭಗವಂತನನ್ನೇ ಕೊಂಡಾಡುವ ಸ್ತುತಿಸುವ ವರ್ಣಗಳು ಮಾತುಗಳೇ ಎನ್ನ ಮನ ಮನೆಗಳಲ್ಲಿ ವೃದ್ಧಿ ಆಗಲಿ.

*ಸುಧಾನ್ಯವೃದ್ಧಿಂ ಕುರು ಮೇ ಗೃಹೇ ಶ್ರೀಃ* 

ಪ್ಲಾಸ್ಟೀಕಿನ ಸಾಮಾನುಗಳೇ ಮನೆಯಲ್ಲಿ ಕಸ ತುಂಬಿದ ಹಾಗೆ ತುಂಬಿ ಹೋಗಿವೆ. ದೇವರ ನಿನ್ನ ನೈವೇದ್ಯಕ್ಕೆ ಬಳಿಸುವ ಒಂದೂ ಪದಾರ್ಥ ನನ್ನ ಮನೆಯಲ್ಲಿ ಇಲ್ಲವೇ ಇಲ್ಲ. ಇದ್ದರೂ ೧% ಪದಾರ್ಥಗಳು ಇವೆ. ಆ ಪದಾರ್ಥಗಳನ್ನೂ ನೈವೇದ್ಯ ಮಾಡುವದೇ ಇಲ್ಲ. ಇದಕ್ಕೂ ಶೋಚನೀಯ ಸ್ಥಿತಿ ಇನ್ನೇನಿದೆ... ??

ನಿನಗೆ,  ನಿನ್ನ ಪತಿಗೆ , ನಿನ್ನ ದಾಸರಿಗೆ ಪ್ರಿಯವಾಗುವ ಧಾನ್ಯಗಳು ಪದಾರ್ಥಗಳು ನಮ್ಮ ಮನ ಹಾಗೂ ಮನೆಯಲ್ಲಿ ಬೆಳೆಯುವಂತೆ ಮಾಡೇ...

*ದಯಾಸು ವೃದ್ಧಿಂ ಕುರುತಾಂ ಮಯಿ ಶ್ರೀಃ*

ನಿನ್ನ ಪೂಜಿಸುವ ಅವಶ್ಯಕತೆಯೇ  ಇರದಷ್ಟು  ಶ್ರೀಮಂತಿಕೆ ಎನ್ನಲ್ಲಿ‌ ಇದೆ. ಇದರಲ್ಲಿ ನನಗಂತೂ ಸಂಶಯವಿಲ್ಲ. ಆದರೆ ಆ ಶ್ರೀಮಂತಿಕೆಯಿಂದ  ಸ್ವಲ್ಪವೂ ಸಂತೃಪ್ತಿ ಶಾಂತಿ ಸಮಾಧಾನಗಳು ಸರ್ವಥಾ ಇಲ್ಲ. ಯಾಕೆಂದರೆ *ನಿನ್ನ ದಯೆಯಿಲ್ಲದ ಶ್ರೀಮಂತಿಕೆ ಎನ್ನಲ್ಲಿ ಇದೆ. ...*

ಅಮ್ಮ  ಆ ಶ್ರೀಮಂತಿಕೆ ಎನಗೆ ಸರ್ವಥಾಬೇಡ. ನಿನ್ನ ದಯೆ ಕ್ಷಣಕಾಲವಿಲ್ಲದೆ ಇರುವದೂ ಬೇಡ. ನನ್ನಲ್ಲಿ ನಿರಂತರ ದಯಾಸುವೃಷ್ಟಿಯನ್ನು ಸುರಿತಾ ಇರು. *ಶ್ರೀಮಂತಿಕೆಯನ್ನು ತ್ಯಜಿಸಿ, ನಿನ್ನ ದಯೆಯನ್ನು ಪಡೆದವರೇ ಮಹಾನುಭಾವಿಗಳು ಆಗಿದ್ದಾರೆ* ಇದು ಹಿಂದಿನ ಎಲ್ಲ ಗುರುಗಳಿಂದಾರಂಭಿಸಿ ಇಂದಿನ ನಮ್ಮ ಗುರುಗಳವರೆಗೂ ಕಾಣುತ್ತೇವೆ.

ವೇದಾ ಹೆಸರಿನಿಂದ ಅನಂತ ದೇಶದಲ್ಲಿ ದೇವರನ್ನು ಸ್ತುತಿಸುತ್ತಿಯಾ. ದುರ್ಗಾ ಎಂಬ ನಾಮದಿಂದ ದೇವರೆದುರಿಗೇ ನಿಂತ ಕೈಂಕರ್ಯವನ್ನು ಮಾಡುತ್ತೀಯಾ. ಶ್ರೀ ಭೂ ಹೆಸರುಗಳಿಂದ ದೇವರ ಎಡ ಬಲಗಳಲ್ಲಿ ಆಲಿಂಗಿಸಿ ಕುಳಿತುಕೊಂಡವಳಾಗಿದ್ದೀಯಾ. ಮಹಾಲಕ್ಷ್ಮೀ ಎಂಬ ನಾಮ ದಿಂದ ದೇವರ ತೊಡೆಯಮೇಲೆಯ ವಾಸವಾಗಿರುವಿ. ಶ್ರೀ ಎಂಬ ನಾಮದಿಂದ ವಕ್ಷಸ್ಥಳದಲ್ಲಿ ಆಶ್ರಯಿಸಿರುವಿ. ದಕ್ಷಿಣಾ ಎಂಬ ನಾಮದಿಂದ ಸಂಪೂರ್ಣ ಅರ್ಧದೇಹದಲ್ಲಿಯೇ ವ್ಯಾಪಿಸಿ ಇದ್ದೀ. ಸಮನಾ ಎಂಬ ಹೆಸರಿನಿಂದ ದೇವರು ಎಲ್ಲೆಲ್ಲಿ ಇದ್ದಾನೆ ಅಲ್ಲಲ್ಲಿ ಒಂದೊಂದು ರೂಪದಿಂದ ಇದ್ದೀ.  ದೇವರನ್ನು  ಬಿಟ್ಟಿರುವ ಪ್ರಸಂಗವೇ ನಿನಗೆ ಅನಾದಿಯಿಂದಿ ಬಂದಿಲ್ಲ. ಮುಂದೆ ಅನಂತಕಾಲದವರೆಗೂ ಬರುವದಿಲ್ಲ.  *ದೇವರನ್ನು ಬಿಟ್ಟಿರದ ಸೌಭಾಗ್ಯವನ್ನು ನನಗೂ ದಯಪಾಲಿಸೇ......* ಎಂದು ಪ್ರಾರ್ಥಿಸುತ್ತಾ ಇಂದಿನ ಮಹಾಲಕ್ಷ್ಮೀ ಪೂಜೆಯನ್ನು  ಆರಂಭಿಸೋಣ. ಪೂಜಿಸೋಣ. ಸಮರ್ಪಿಸೋಣ.

*✍🏽✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*