*ನಿಷ್ಕಲಷ ಪ್ರೀತಿಯೊಂದೇ ಅಭ್ಯುದಯದ ರಾಜಮಾರ್ಗ*
*ನಿಷ್ಕಲಷ ಪ್ರೀತಿಯೊಂದೇ ಅಭ್ಯುದಯದ ರಾಜಮಾರ್ಗ*
ಅಭ್ಯುದಯ ಎಲ್ಲರಿಗೂ ಬೇಕು. ಆದರೆ ನಿಷ್ಕಲ್ಮಷ ಪ್ರೀತಿ ಯಾರಿಗೂ ಬೇಡ. ಇದು ಇಂದಿನ ಅವಸ್ಥೆ. ಪ್ರೀತಿಯಿಲ್ಲದೆ ಅಭ್ಯುದಯ ಆಗದು. ಅಭ್ಯುದಯಕ್ಕೆ ಪ್ರೀತಿ ಸ್ನೇಹ ಭಕ್ತಿ ಇವುಗಳು ಅನಿವಾರ್ಯ.
*ಮಹಾಶಕ್ತಿಗಳ ನಡುವೆ ನಾನಿದ್ದೇನೆ*
ನನ್ನಷ್ಟು ಸುಭದ್ರಸ್ಥಿತಿಯಲ್ಲಿ ಯಾರಿರಲಿಕ್ಕಿಲ್ಲ. ಸುಭದ್ರಸ್ಥಿಯನ್ನು ಹಾಳುಮಾಡಿಕೊಂಡತಹ ಮೂರ್ಖನೂ ಯಾರಿರಲಿಕ್ಕಿಲ್ಲ. *ಅಣುವಿಕಿಂತಲೂ ಅಣುವಾದ ದೇವ ಒಂದೆಡೆ ಇದ್ದಾನೆ, ಮಹತ್ತಿಗಿಂತಲೂ ಮಹಾನ್ ಆದ ಅದೇ ದೇವ ಮತ್ತೊಂದೆಡೆ ಇದ್ದಾನೆ- ಇವರೀರ್ವರ ಮಧ್ಯದಲ್ಲಿ ನಾನು ಇದ್ದರೂ ಇಲ್ಲದಂತೆ ಇದ್ದೇನೆ* ತುಂಬ ವಿಚಿತ್ರ ಅನಿಸತ್ತೆ.
*ಹಿತೈಷಿ ಪ್ರಬಲ ಶಕ್ತಿಗಳು ಅಕ್ಕಪಕ್ಕದಲ್ಲಿ ಇರುವಾಗ ನಾನೇಕೆ ದುರ್ಬಲ*
ಆ ಪ್ರಬಲಶಕ್ತಿಗಳನ್ನು ಪ್ರೀತಿಸದೇ ಇರುವದೇ ಎನ್ನ ದೌರ್ಬಲ್ಯಕ್ಕೆ ಕಾರಣ. "ಒಂದೆಡೆ ಅಂತರಾತ್ಮ. ಮತ್ತೊಂದೆಡೆ ಪರಮಾತ್ಮ" ಈಬ್ಬರನ್ನೂ ಪ್ರೀತಿಸದೇ ಇರುವದರಿಂದಲೇ ನನ್ನ ಅವಸ್ಥೆ ಆಚೆಯೂ ಇಲ್ಲ, ಈಚೆಯೂ ಇಲ್ಲ. ಅಂತರಪಿಶಾಚಿಯ ಅವಸ್ಥೆಯಾಗಿದೆ.
ನಾವು ದೇವರನ್ನು ಪ್ರೀತಿಸಿದರೂ ದೇವರು ನನ್ನನ್ನು ಪ್ರೀತಿಸಬೇಕು ಅಲ್ಲವೆ.. ದೇವರು ನನ್ನನ್ನು ಪ್ರೀತಿಸುವದೇ ಇಲ್ಲ... ನಾನೆಂದರೆ ಅವನಿಗೆ ತಾತ್ಸಾರ....
ದೇವರು ನನ್ನನ್ನು ಪ್ರೀತಿಸುವದಿಲ್ಲ ಎಂಬುವದು ಸಾಧ್ಯವೇ ಇಲ್ಲ. ದೇವರಲ್ಲಿ ಎನ್ನ ಬಗ್ಗೆ ಪ್ರೀತಿ ಕಡಿಮೆಯಾದರೆ ಅವನು *ಅಪೂರ್ಣ* ಎಂದಾಗುವ. ಪ್ರೀತಿಯೇ ಇಲ್ಲ ಎಂದಾದರೆ *ಅನಂತ ಗುಣವಂತ* ಎಂದಾಗದೇ ಹೋಗುವ. ತಾತ್ಸಾರ ದ್ವೇಷಗಳು ಇವೆ ಎಂದಾದರೆ *ದೋಷಿ* ಎಂದಾಗುವ. ಇದ್ಯಾವದೂ ದೇವರಲ್ಲಿ ಇಲ್ಲವೇ ಇಲ್ಲ. ಹಾಗಾದರೆ....
.... ಹಾಗಾದರೆ ನಾನು ದೇವರಲ್ಲಿ ಹೋಗಿಲ್ಲ, ದೇವರನ್ನು ಪ್ರೀತಿಸಿಲ್ಲ ಎಂದೇ ಅರ್ಥ ... ನಿಷ್ಕಲ್ಮಷವಾಗಿ ಪ್ರೀತಿಸಲು ಸಾಧ್ಯವಾಗದಷ್ಟು ಗೊಂದಲಗೂಡಾಗಿದ್ದೇನೆ ನಾನು.
ಚಿಕ್ಕ ಮುದ್ದಾದ ಮೂರು ಬೆಕ್ಕಿನ ಮರಿಗಳು ಇದ್ದವು. ಒಂದೆಡೆ ತಾಯಿಯೂ ಇದ್ದಾಳೆ. ಮತ್ತೊಂದೆಡೆ ಪ್ರಾಣಿಪ್ರಿಯರಾದ ಅನೇಕರೂ ಇದ್ದಾರೆ. ತಾಯಿ ನಿರಂತರ ಪ್ರೀತಿಸುತ್ತಾಳೆ. ಪ್ರಾಣಿಪ್ರಿಯರೂ ಪ್ರೀತಿಸುತ್ತಾರೆ. ಕಾಲು ಬಂದು ಓಡಾಡುವ ಶಕ್ತಿ ಬಂದ ಆ ಬೆಕ್ಕಿನ ಮರಿಗಳು ತಾಯಿಯನ್ನು ಬಿಟ್ಟು ಹೊರ ಬೀಳುತ್ತವೆ. ತಾಯಿಯ ಮಡಿಲು ಬಿಟ್ಟ ಕ್ಷಣಕ್ಕೆನೇ ನಾಯಿ ನರಿಗಳು ಆ ಬೆಕ್ಕಿನ ಮರಿಗಳನ್ನು ತಿನ್ನಲು ಹಿಂದೆ ಬೀಳುತ್ತವೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆದಾಡಿ ಸುಸ್ತಾಗಿ ಹೋದವು ಬೆಕ್ಕಿ ಮರಿಗಳು.
ಒಂದು ಬೆಕ್ಕಿನ ಮರಿ ತಾಯಿ ಮಡಲೇ ಉತ್ತಮ ಎಂದು ಯೋಚಿಸಿ ತಾಯಿ ಮಡಿಲಿಗೆ ಸೇರಿತು. ಕೊನೆಯ ಬೆಕ್ಕಿನ ಮರಿ ಒಂದು ಕಂಪೌಂಡು ಸೇರಿತು. ಮಧ್ಯದ್ದು ಅಭಿಮಾನ, ಅಹಂಕಾರಗಳಿಂದ ಕಾಡಿನಲ್ಲೇ ಅಲೆದಾಡಿತು. ಕೊನೆಯದು ಕಾಡು ಮೇಡು ಅಲೆದಾಡಿ, ಉಪವಾಸಬಿದ್ದು, ಏನೇನೋ ಕಷ್ಟಪಟ್ಟು ನಾಯಿ ನರಿ ಪಾಲಾಗಿ ಸತ್ತು ಹೋಯಿತು. ಮೊದಲನೇಯದು ತಾಯಿಯನ್ನೇ ಪ್ರೀತಿಸಿದ್ದಕ್ಕಾಗಿ ತಾಯಿಯ ಮಡಿಲಲ್ಲಿ ಸುರಕ್ಷಿತವಾಗಿ ಉಳಿತು.
ಕೊನೆಗೆ ಮೂರನೇಯದು ಒಂದು ಕಂಪೊಂಡು ಸೇರಿತು. ಆ ಮನೆಯೋ ಪ್ರಾಣಿಪ್ರಿಯರ ಮನೆ. ಬೆದರಿದ, ಹಸಿದ, ಸುಸ್ತಾದ, ಆ ಬೆಕ್ಕಿನ ಮರಿಯನ್ನು ಕಂಡ ಮನೆಯ ಹುಡಗರು, ಹಾಲು ಮೊಸರು ತಂದಿಡುತ್ತಾರೆ. ಪ್ರೀತಿಂದ ರಕ್ಷಿಸಲು ಮೈಮೇಲೆ ಕೈಯಾಡಿಸಲು ಹೋದರೆ, ಇವರನ್ನೇ *ಗುರ್ ಗುರ್ ಎಂದು ಬೆದರಿಸಿ ಓಡಿಸಿಬಿಡುತ್ತದೆ.* ಯಾಕೆಂದರೆ ಈ ಬೆಕ್ಕಿಗೆ ಅವರ ಮೇಲೆ ಪ್ರೀತಿ ಇಲ್ಲ.
ಹೆದರಿ, ಹಸಿವೆಯಿಂದ ಸುಸ್ತಾದ ಬೆಕ್ಕು ಏನು ಮಾಡತ್ತೆ ಎಂದು ಯೋಚಿಸುತ್ತಾ ಇವರೆಲ್ಲರೂ ಆಚೆ ನಿಂತು ನೋಡುತ್ತಿರುತ್ತಾರೆ, ಯಾರೂ ಸನಿಹ ಇಲ್ಲ ಎಂದು ನೋಡಿದ ಬೆಕ್ಕು ಹಾಲು ಕುಡಿದು, ಮೊಸರು ತಿಂದು ಮೆಲ್ಲಕೆ ಜಾಗ ಖಾಲಿ ಮಾಡತ್ತೆ. ಮತ್ತೆ ಮರುದಿನ ಹೀಗೆಯೆ. ಈ ರೀತಿಯಾಗಿ ತಿಂಗಳು ತಿಂಗಳು ಉರುಳಿದ ಮೇಲೆ ಆ ಬೆಕ್ಕು ಒಂದು ದಿನ ಮೆಲ್ಲಕೆ ಆ ಮಕ್ಕಳನ್ನು ನೋಡಿ ಪ್ರೀತಿಯಿಂದ *ಮಿಯಾಂವ್* ಅಂತು. ಅಂದಿದ್ದೇ ತಡ ಆ ಎಲ್ಲ ಜನರೂ ಅದನ್ನು ಮನೆಯ ಮಗುವಾಗಿ ಸ್ವೀಕರಿಸಿದರು. ಯಾಕೆ ಸ್ವೀಕರಿಸಿದರು ..?? ತಾವು ಪ್ರೀತಿ ಮಾಡುತ್ತಾನೇ ಇದ್ದರು, ಆ ಬೆಕ್ಕೂ ಪ್ರೀತಿಸಿತು. ಅವರು ಸ್ವೀಕರಿಸಿದರು.
ಬೆಕ್ಕು ಅಡ್ಡ ಹೋದರೆ ಅನಿಷ್ಟ ಎಂದು ಬಿರಿಯುವ ಜನರೇ ಆ ಬೆಕ್ಕನ್ನು ಮೈಮೇಲೆ ಇಟ್ಟುಕೊಂಡರು, ತಾವು ಉಣ್ಣುವ ಆಹಾರವನ್ನು ಅದಕ್ಕೂ ಇಟ್ಟರು. ಪ್ರಾಣಿ ಪ್ರಿಯರು ಆಗಿರುವದರಿಂದ ಹುಲಿ ಸಿಂಹ ಇವುಗಳ ಮಧ್ಯೇ ಇಟ್ಟೂ, ಅವುಗಳಿಂದ ಅಪಾಯ ಬರದಿರುವಂತೆ ರಕ್ಷಿಸಿದರು. ಹೀಗೆಯೇ........
ನಾನು ಅಂತರಾತ್ಮನನ್ನು ಪ್ರೀತಿಸಿದ್ದರೆ, ಅವನ ಮಡಿಲಲ್ಕೇ ಇದ್ದು ಧ್ಯಾನ ಮೌನಗಳಿಂದ ಮುಕ್ತಿ ಪಡೆಯಬಹುದು. ಸಂಸಾರದಲ್ಲಿ ಬಿದ್ದು ಬೆಂದು ಒದ್ದಾಡಿ, ತತ್ವಜ್ಙಾನ ಪಡೆದ ಮೇಲಾದರೂ ಹೊರ ವ್ಯಾಪಿಸಿದ ದೇವರ ಪೂಜೆ, ಧ್ಯಾನ, ಜ್ಙಾನ, ಭಕ್ತಿ ಬೆಳಿಸಿಕೊಂಡು ಅವನ ಭಕ್ತರನ್ನು ಪ್ರೀತಿಸಿ ಅವರು ವಾಸಿಸುವ ಮನೆ ಸೇರಿದರೂ ಆಯಿತು, ಸಂಸಾರದಲ್ಲಿ ಇದ್ದರೂ ನಮ್ಮ ರಕ್ಷಣೆ ಸದಾ ಇರತ್ತೆ. ಆದರೆ.......
ಅಂತರಾತ್ಮನನ್ನೂ ಪರಮಾತ್ಮನನ್ನೂ ಪರಮಾತ್ಮನ ದಾಸರನ್ನೂ ಪ್ರೀತಿಸದೇ ಇರುವದರಿಂದಲೇ "ಮಧ್ಯ ಬೆಕ್ಕಿನ ಮರಿಯ ಅವಸ್ಥೆ ನನಗಾಗಿದೆ- ಸಂಸಾರದಲ್ಲಿ ಅಲೆದಾಡಿ, ಬಿದ್ದು, ಬೆಂದು, ಸತ್ತು ಹುಟ್ಟಿ ಸತ್ತು ಹುಟ್ಟಿ" *ಪುನರಪಿ ಜನನಂ ಪುನರಪಿ ಮರಣಂ* ಎಂಬಂತಾಗಿದೆ.
ಅಂತರಾತ್ಮನನ್ನೋ ಅಥವಾ ಪರಮಾತ್ನನನ್ನೋ ಅಥವಾ ಪರಾಮಾತ್ಮನ ದಾಸರನ್ನೋ ಪ್ರೀತಿಸುವ ಸೌಭಾಗ್ಯವೇ ನಮ್ಮ ಜೀವನದ ಮುಕ್ತಿಯ ರಾಜ ಮಾರ್ಗ ಎಂದು ಖಂಡಿತವಾಗಿಯೂ ಹೇಳಬಹುದು. ಆ ಕೌಶಲವನ್ನು ಗುರು ದೇವತಾ ದೇವರುಗಳು ಅನುಗ್ರಹಿಸಲಿ.
*✍🏽✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments