*ನನ್ನೊಟ್ಟಿಗೆ ಮಾತಾಡಲು ಸಮಯವಿದೆಯಾ....*



*ನನ್ನೊಟ್ಟಿಗೆ ಮಾತಾಡಲು ಸಮಯವಿದೆಯಾ....*

ಮಾತಾಡಲು ಸಮಯ ಪ್ರೀತಿ ಇದ್ದಾಗೆ ಇರುತ್ತದೆ. ಪ್ರೀತಿ ಇಲ್ಲದಾದಾಗ ಸಮಯವಿದ್ದರೂ ಮಾತಾಡಲು ಆಗದು. ಹೀಗಿರುವಾಗ "ನನ್ನೊಟ್ಟಿಗೆ ಮಾತಾಡಲು ಸಮವಿದೆಯಾ..." ಅಂದರೆ "ನನಗಂತೂ ಇಲ್ಲ" ಎಂದು ಹೇಳುವೆ. ಸಮಯವಿಲ್ಲ ಎನ್ನುವದಕ್ಕಿಂತಲೂ ಮಾತಾಡಲು ಆಗದು ಎಂದು ಹೇಳಬಹುದು. 

ನನ್ನೊಟ್ಟಿಗೆ ನಾನೇ ಮಾತಾಡುವದು ಎಂದರೇ ಏನು..??

ನಾನು ಇಂದು ಯಾರೆಲ್ಲರ ಜೊತೆಗೆ ಮಾತಾಡುತ್ತೇನೆ, ಆ ಎಲ್ಲರೂ ಒಂದರ್ಥದಲ್ಲಿ ಬಾಡಗಿದಾರರೆ, ನಾನು ಮಾತಾಡಲೇ ಬೇಕಾದ, ನನ್ನೊಟ್ಟಿಗೇ ಕ್ಷಣಬಿಡದೆ ಇರುವ ಯಜಮಾನ ಅಂದರೆ ನನ್ನ ಪಾಲಿಗೆ ನಾನೆ. ಹೀಗಿರುವಾಗ ನನ್ನೊಟ್ಟಿಗೇ ಇರುವ ನನ್ನ ಜೊತೆಗೆ ಮಾತಾಡುವ ಮನಸ್ಸು ಮಾಡಿಲ್ಲ. ಮಾತಾಡಿಲ್ಲ. ಒಂದರ್ಥದಲ್ಲಿ ನನ್ನನ್ನು ನಾನು ಮರೆತಿದ್ದೇನೆ. 

ಪ್ರೀತಿಸಿದಾಗ, ಜೊತೆಗೆ ಇರುವದು ಮಾತಾಡುವದು ಸಹಜ, ದ್ವೇಶದ ಕಿಡಿಹತ್ತಿದಾಗ ದೂರಾಗುವದೂ ಅಷ್ಟೇ ಸಹಜ. ಪ್ರೀತಿ ಮಾಡಿದರೂ, ದ್ವೇಶ ಮಾಡಿದರೂ, ತಿರಸ್ಕಾರ ಮಾಡಿದರೂ, ಆದರ ಸತ್ಕಾರ ತೋರಿಸಿದರೂ, ಅವಮಾನ ಮಾಡಿದರೂ ನನ್ನ ಕ್ಷಣ ಬಿಡದೆ ನನ್ನೊಟ್ಟಿಗೆ ಇರುವವನು *ನಾನು ಮಾತ್ರ.*  ಹೀಗಿರುವಾಗ ನನಗಾಗಿ, ನನ್ನ ಹಿತಕ್ಕಾಗಿ, ನನ್ನೊಟ್ಟಿಗೆ ಮಾತಾಡದಿರುವದು, ಮಾತಾಡಲು ಯೋಚಿಸಲು ಸಮಯವಿಟ್ಟಕೊಳ್ಳದಿರುವದು ನಿಜವಾಗಿಯೂ ಕೆಲೊಮ್ಮೆ ವಿಚಿತ್ರ ಎನಿಸಿದರೆ ಮತ್ತೆ ಕೆಲೊಮ್ಮ ಹಾಸ್ಯಾಸ್ಪದ ಎನಿಸುತ್ತದೆ.....

ಮಾತುಗಳು ಅಳ್ಳುಹುರಿದ ಹಾಗೆ ಪಟ ಪಟ ಉದುರುವದು  ಮನಸ್ಸಿನಲ್ಲಿ ಏನೂ ಸ್ಪಷ್ಟತೆ ಇಲ್ಲದಿರುವಾಗ ಮಾತ್ರ. ಏನಾದರೂ ಮನಸ್ಸಿನಲ್ಲಿ ಇದ್ದರೆ *ಮಾತುಗಳು ತಡಬಡಿಸಲು ಆರಂಭಿಸುತ್ತದೆ* ಸರಾಗವಾಗಿ ಮಾತುಗಳು ಬಾರವು. ಇದು ಎಲ್ಲರ ಅನುಭವಸಿದ್ಧ. ಹಾಗೆಯೇ ಇಂದು ನನ್ನ ಬಗ್ಗೆ ನನಗೇ, ನನ್ನ ಮನಸ್ಸಿನಲ್ಲಿ ಸ್ಪಷ್ಟತೆ ಇಲ್ಲ. ನನ್ನ ಬಗ್ಗಯೇ ಸಂಶಯವಿದೆ, ಗೊಂದಲವಿದೆ, ದ್ವೇಶವಿದೆ, ತಾತ್ಸಾರವಿದೆ, ಪ್ರೀತಿಯಿದೆ, ಏನಿದೆಯೋ ಇದೆ.. ಆದರೆ ಯಾವುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಹಾಗಾಗಿ ನನ್ನ ಬಗ್ಗೆ ನನಗೆ ಮಾತಾಡಲು, ಯೋಚಿಸಲು ತುಂಬ ತಡಬಡಿಸುತ್ತೇನೆ. 

ನನ್ನಲ್ಲಿ ಮೊದಲು ಆಗಬೇಕಾದ ಕಾರ್ಯವೆಂದರೆ, ನಾನು ಯಾರು.. ಏನಕ್ಕೆ ಬಂದಿದ್ದೇನೆ... ನನಗೇನು ಹಿತ.... ನಾನು ಮಾಡಬೇಕಾದದ್ದು ಏನು.... ನನ್ನೊಟ್ಟಿಗೆ ಏನು ಬಂದರೂ ಇರುವವರು ಯಾರು.... ನನ್ನನ್ನು ನಿಜವಾಗಿ ಪ್ರೀತಿಸುವವರು ಯಾರು..... ನನ್ನ ಯೋಗ್ಯತೆ ಎಂತಹದ್ದು..... ಇಂದು ನಾನು ಮಾಡುತ್ತಿರುವ ಕರ್ಮಗಳು ಯಾವಸ್ತರದ್ದು..... ಇತ್ಯಾದಿಯಾದ ಸ್ಪಷ್ಟತೆ ನನ್ನ ಬಗ್ಗೆ ಬಂದ ಹಾಗೆ ನನಗಾಗಿ ಯೋಚಿಸಲು ಸಮಯಸಿಗುತ್ತದೆ. ಆಗ *ನಾನು ನನ್ನೊಟ್ಟಿಗೆ ಕುಳಿತು ಆನಂದದಲ್ಲಿ ಮಾತಾಡಲು ಆರಂಭಿಸುತ್ತೇನೆ....* ನನಗೆ ನಾನೇ ಕೇಂದ್ರನಾಗಿಬಿಡುತ್ತೇನೆ. 

ಯಾವ ಕ್ಷಣಕ್ಕೆ ನಾನು ನನ್ನನ್ನು ತಿಳಿಯಲು, ನನ್ನನ್ನು ಪ್ರೀತಿಸಲು,  ನನ್ನೊಟ್ಟಿಗೆ ಮಾತಾಡಲು ಆರಂಭಿಸುತ್ತೇನೆಯೋ ಆ ಕ್ಷಣಕ್ಕೇನೆ ಇನ್ನೊಂದು ಯೋಚನೆ ಆರಂಭವಾಗುತ್ತದೆ..... 

ಕ್ಷಣಬಿಡದೇ ನನ್ನೊಟ್ಟಿಗೇ ಇದ್ದು, ನನ್ನ ಹಿತ ಬಯಸುವವರು ಯಾರು.. ??

ಆ ವಿಚಾರ ಮನಸದಸಿನಲ್ಲಿ ಸುಳಿಯಿತು ಎಂದಾದರೆ, ಹುಡಕಲು ಆರಂಭಿಸುತ್ತಾನೆ.  ಹುಡುಕಿ ಹುಡುಕಿ ಹತಾಶನಾಗಿ ಇರುವಾಗ ಸುಳಿಯುವವನೇ ದೇವ. ಕ್ರಿಮಿ, ಕೀಟ, ನೊರಜು, ಜಿರಳೆ, ಇಲಿ, ಕತ್ತೆ, ಕೋತಿ, ಹಂದಿ, ನಾಯಿ, ಮನುಷ್ಯ, ಬಡವ, ದರಿದ್ರ, ಸಿರಿವಂತ, ಧಡ್ಡ, ಬುದ್ಧಿವಂತ, ಋಷಿ, ದೇವತೆ ಏನಾಗಿ ಹುಟ್ಟಿದರೂ.... ಸ್ವರ್ಗ, ನರಕ, ಭೂಮಿ, ಗಂಗೆಯಲ್ಲಿ, ತಿರುಪತಿಯಲ್ಲಿ, ಸ್ಮಶಾನದಲ್ಲಿ, ಮೋರೆಯಲ್ಲಿ, ಇನ್ನೇನೋ ಹೊಲಸಿನಲ್ಲಿ ಹುಟ್ಟಿ ಬಂದರೂ *ನನ್ನನ್ನು ಕ್ಷಣ ಬಿಡದೆ ಇದ್ದು, ನನ್ನ care ತೊಗೊಂಡು, ನನ್ನನ್ನು ರಕ್ಷಿಸಿ, ಸಂರಕ್ಷಿಸಿ ಇರುವ ಅತಿ ದೊಡ್ಡ ಗೆಳಯ ಅಂದರೆ ಅದು ಶ್ರೀಹರಿ ಮಾತ್ರ*  ಎಂದು ಸ್ಪಷ್ಟವಾಗುತ್ತಾ ಸಾಗುತ್ತದೆ. ಆಗ ಶ್ರೀಹರಿಗೇ ಪ್ರಿಯನಾಗಿರಲು ತಡಬಡಿಸುತ್ತಾನೆ. *ನನ್ನೊಟ್ಟಿಗೇ ಇರುವವ ನಾನು, ನಾನು‌ ನಾನಾಗಿರಲು ಕಾರಣ ನನ್ನ ಶ್ರೀಹರಿ*  ನಾವಿಬ್ಬರು ಮಾತ್ರ ಅನಾದಿಯಿಂದ ಅನಂತಕಾಲದ ವರೆಗೆ ಇರುವ ಜೋಡಿ ಹಕ್ಕಿಗಳು ಎಂಬುವದು ಸ್ಪಷ್ಟವಾಗುತ್ತಾ ಸಾಗುತ್ತದೆ... 

ಹೀಗೆ ಬೆಳೆದಾಗ ಮಾತ್ರ ನನಗಾಗಿ ನನ್ನ ಶ್ರೀಹರಿಗಾಗಿ ಮಾತಾಡಲು ಸಮಯ ಸಿಗತ್ತೆ, ಎಷ್ಟೇ ಸಂಸಾರದ ಒತ್ತಡವಿದ್ದರೂ ಕ್ಷಣ ಬಿಡುವು ಮಾಡಿಕೊಂಡು ಧ್ಯಾನ ಮೌನ ಜಪ ತಪ ಈ ತರಹದ ಸಾಧನೆಗಳಲ್ಲಿ ಮನ ಬರುತ್ತದೆ..... *ಸಮಯವೂ ಸಿಗುತ್ತದೆ....*

*✍🏽✍🏽✍ನ್ಯಾಸ....*
ಗೋಪಾಲದಾಸ. 
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*