*ಬುದ್ಧಿಯ ಪ್ರೇರಿಸೆ ಪ್ರದ್ಯುಮ್ನನ ಸಖಿ.....*
*ಬುದ್ಧಿಯ ಪ್ರೇರಿಸೆ ಪ್ರದ್ಯುಮ್ನನ ಸಖಿ.....*
ಬ್ರಹ್ಮದೇವರಿಂದ ಆರಂಭಿಸಿ ಅನಂತಾನಂತ ಜೀವರಾಶಿಗಳ "ಬುಧ್ಧಿ"ಗೆ ಅಭಿಮಾನಿ ಮಹಾಲಕ್ಷ್ಮೀದೇವಿ.
ಮನಸ್ಸು ತನಗೆ ರುಚಿಸಿದ್ದನ್ನು ಹಾಗೂ ತನಗೆ ಆಕರ್ಷಿಸಿರುವದನ್ನೇ ಯೋಚಿಸಿದರೆ, "ಬುದ್ಧಿ" ಯಾವದು ಹಿತ ಯಾವುದು ಅಹಿತ, ಯಾವದು ಸೂಕ್ತ ಯಾವದು ಸೂಕ್ತವಲ್ಲ, ಇದನ್ನೇ ಮಾಡಬೇಕು ಇದನ್ನಲ್ಲ, ಇತ್ಯದಿಯಾಗಿ ನಿರ್ಣಯ ತೆಗೆದುಕೊಳ್ಳುತ್ತದೆ.
ಮನಸ್ಸು ಇರುವದು ಎಲ್ಲ ಪ್ರಣಿಗಳಿಗೂ, ಮಾನವನಿಗೂ ಸಮಾನ. *ಬುದ್ಧಿವಂತ* ಎಂಬುವ ಗೌರವ ಇರುವದು ಬುದ್ಧಿ ಇರುವವನಿಗೆ ಮಾತ್ರ. ಅಂತಹ ಅಮೋಘವಾದ "ಬುದ್ಧಿ" ಗೆ ನಿಯಾಮಕಳು, ಅಭಿಮಾನಿಯು, ಪ್ರೇರಕಳು, ಪ್ರಚೋದಕಳು, ಮಹಾಲಕ್ಷ್ಮೀ ದೇವಿ.
"ಅನಂತಸೌಭಾಗ್ಯಪ್ರದ" ಳು ಲಕ್ಷ್ಮೀ ದೇವಿ. ಅಂತಹ ಲಕ್ಷ್ಮೀದೇವಿಯ ಸನಿಹ ತೆರಳಿ ಬಿಡಿಕಾಸು ಬೇಡುವದು ಏನಿದೆ ಲಕ್ಷ್ಮೀದೇವಿಗೆ ಮಾಡುವ ದೊಡ್ಡ ಅವಮಾನವಿದ್ದಂತೆಯೇ ಸರಿ....
ಲಕ್ಷ್ಮೀದೇವಿ ವಿಷ್ಣು ಪ್ರೀತಿಯನ್ನೇ ಕೊಡುವವಳು, ಮಹಾಜ್ಙಾನವನ್ನೀಯುವವಳು, ಭಕ್ತಿ ವಿರಕ್ತಿಗಳನ್ನು ಕೊಡುವವಳು, ನನ್ನದೇ ಆದ ಆನಂದ ಜ್ಙಾನ ಸುಖ ಸಹನೆ ದಯೆ ಪ್ರೀತಿ ವಿಶ್ವಾಸ ಸ್ನೇಹ ಮೊದಲಾದ ಗುಣಗಳ ಮೇಲೆ ಶಾಶ್ವತ ಐಶ್ವರ್ಯ ಶಾಶ್ವತವಾದ ಒಡೆತನ ಕೊಡುವವಳು. ಮೋಕ್ಷವನ್ನೇ ದಯಪಾಲಿಸುವವಳು ಲಕ್ಷ್ಮೀದೇವಿ. ಇಂತಹ ಲಕ್ಷ್ಮದೇವಿಯಲ್ಲಿ ಬಿಡಿಕಾಸು ಬೇಡಿದರೆ ನಾನೆಷ್ಟು ಪೆದ್ದು ಎನ್ಮುವದನ್ನೂ ತೋರಿಸಿಕೊಟ್ಟಂತೆಯೇ ಆಗುತ್ತದೆ.
ಹೇ ಅಮ್ಮ!!! ಹೇ ಮಹತಾಯಿ..!! ನೀನು ಅನಂತ ದಯಾಮಯಳು. ನಾವು ನಿನ್ನ ಕುನ್ನಿಗಳು. ಯಾವುದರ ಅಪೇಕ್ಷೆ ಮಾಡುವದರಿಂದ ನಾನು *ಬುದ್ಧಿವಂತ* ಎಂದೆನಿಸುತ್ತೇನೆ ಅಂತಹದ್ದನ್ನೇ ಪ್ರೇರಿಸು. ಕಚಡಾ ಅಪೇಕ್ಷೆಗಳಲ್ಲಿ ಸರ್ವಥಾ ಬುದ್ಧಿಯನ್ನು ಪ್ರೇರಿಸಬೇಡ.
ಏನೂ ಬೇಡುವದರಿಂದ *ನೀನು ಸಂತುಷ್ಟಳಾಗುತ್ತೀಯೋ* *ನನ್ನಬಳಿ ಯೋಗ್ಯವಾದದ್ದನ್ನೇ ಬೇಡಿದ* ಎಂಬ ತೃಪ್ತಿ ಏನನ್ನು ಬೇಡುವದರಿಂದ ಆಗುತ್ತದೆಯೋ ಅಂತಹದರಲ್ಲೇ ಎನ್ನ ಬುದ್ಧಿಯನ್ನು ಪ್ರೇರಿಸು.
*ಲಕ್ಷ್ಮೀದೇವಿಗೆ ತೃಪ್ತಿಯಾಗುವಂತಹ ಬೇಡಿಕೆಗಳು ಇವೆಯೇ...???*
*ಶ್ರೀಶಾಂಘ್ರಿ ಭಕ್ತಿಂ* ನಿನ್ನ ಒಡೆಯನಾದ ಶ್ರೀಹರಿಯಲ್ಲಿ ಭಕ್ತಕೊಡು. *ಹರಿದಾಸದಾಸ್ಯಮ್* ನಿನ್ನ ಪತಿಯಾದವ ಶ್ರೀಹರಿ, ಅವನ ದಾಸಳು ನೀನು, ನಿನ್ನ ದಾಸ್ಯವನ್ನು ಸರ್ವಥಾ ಕೊಡು. *ಪ್ರಪನ್ನಮಂತ್ರಾರ್ಥ ಧೃಢೈಕನಿಷ್ಠಾಂ* ನನ್ನ ಪಾಲಿನ ಮಂತ್ರಗಳಾದ ಸುಧಾ ತತ್ವಪ್ರಕಾಶಿಕಾ ಮೊದಲಾದ ಉದ್ಗ್ರಂಥಗಳು, ಅವುಗಳ ಅಧ್ಯಯನದಲ್ಲಿ ದೃಢವಾದ ನಿಷ್ಠೆಯನ್ನಿ ಕೊಡು. ಗಾಯತ್ರೀ ಮೊದಲಾದ ಜಪಗಳಲ್ಲಿಯೂ ಏಕನಿಷ್ಠತೆಯನ್ನೀಯು. *ಗುರೋಃಸ್ಮೃತಿಮ್* ನಿರಂತರ ಗುರುಗಳ ಸ್ಮರಣೆಯ ಕರುಣೆ ಮಾಡು. *ನಿರ್ಮಲಬೋಧಬುದ್ಧಿಮ್* ವಿಪರೀತಜ್ಙಾನ ಭ್ರಾಂತಿ ಮೊದಲಾದ ದೋಷಗಳಿಲ್ಲದ ಪರಿಶುದ್ಧವಾದ ತತ್ವಜ್ಙಾನವನ್ನು ದಯಪಾಲಿಸು. ಈ ತರಹದ ಪ್ರಾರ್ಥನೆ ಏನಿದೆ ಅದರಿಂದ ಮಹಾಲಕ್ಷ್ಮೀದೇವಿಗೂ ಸಂತೃಪ್ತಿ. ನಾವೂ ಬುದ್ಧಿವಂತರು ಎಂದೆನಿಸಿಕೊಳ್ಳುವಂತಾಗುತ್ತದೆ.
ಸೃಷ್ಟಿ ಮಾಡಿದ ದೇವ ಶಾಂತಿಪತಿ ಅನಿರುದ್ಧನಾದರೆ, ಎಡುವಿ ಬೀಳದ ಹಾಗೆ ರಕ್ಷಿಸುವ ದೊರೆ ಕೃತಿಪತಿ ಪ್ರದ್ಯುಮ್ನ.
ಸಂಸಾರದ ಚಟಗಳ ಬಂಧ ಜೇಡಹುಳದ ನೂಲಿನಂತೆ ಆರಂಭವಾಗಿ, ದಿನಕಳೆದಂತೆ ಕಳೆದಂತೆ ಕಬ್ಬಿಣದ ಸರಪಳಿಗ ಳಾಗಿರುತ್ತವೆ. ಆ ಬಂಧದಲ್ಲಿ ನಮ್ಮನ್ನು ನಾವೇ ಹೊರಬರದಂತೆ ಬಿಗಿದುಹಾಕಿಕೊಂಡಿದ್ದೇವೆ. ಅನಾದಿಯಿಂದ ಸೃಷ್ಟಿಗೆ ಬಂದೀವಿ. ಸಂಸಾರದಲ್ಲಿ ಬೀಳದ ಹಾಗೆ ರಕ್ಷಿಸುವ, ಸಂಸಾರ ಪಾಶಗಳಿಂದ ಬಿಡಿಸಿ ಸಂರಕ್ಷಿಸುವವ ಕೃತಿಪತಿ ಪ್ರದ್ಯುಮ್ನ. ಅಂತೆಯೇ ದಾಸರಾಯರು *ಬುದ್ಧಿಯಪ್ರೇರಿಸೆ ಪ್ರದ್ಯುಮ್ನನ ಸಖಿ* ಎಂದು ಮಹಾಲಕ್ಷ್ಮೀದೇವಿಯಲ್ಲಿ ಪ್ರಾರ್ಥಿಸಿದರು.
ವೈಕುಂಠದಲ್ಲಿ ಓಡಾಡುವ, ವೈಕುಂಠದಿಂದಲೇ ನೇರವಾಗಿ ಇಳಿದು ಭುವಿಗೆ ಬಂದ ಕೊಲ್ಹಾಪುರದ ಶ್ರೀಮಹಾಲಕ್ಷ್ಮೀಯ ದರ್ಶನ ಸೌಭಾಗ್ಯ ಅನಿರೀಕ್ಷಿತವಾಗಿ ಒದಗಿಬಂತು. ನನ್ನ ಗುರುಗಳ ಮುಖಾಂತರ ಸರ್ವದೇವತೆಗಳ ಹಾಗೂ ವಾಯುದೇವರ ಮುಖಾಂತರ ಮಹಾಲಕ್ಷ್ಮೀದೇವಿಯಲ್ಲಿ ಪ್ರಾರ್ಥಿಸುವದಿಷ್ಟೆ ನಿನ್ನೊಡೆಯನಿಂದ ಸಹಿತಳಾಗಿ ಇರುವ, ನಿನ್ನ ಮಕ್ಕಳು ಮರಿಮಕ್ಕಳಿಂದ ಸಹಿತಳಾದ ನೀನು ಸಂತುಷ್ಟಳಾಗು. ನಿನ್ನ ದಾಸರ ದಾಸರ ದಾಸ್ಯವನ್ನು ದಯಪಾಲಿಸು. ಅತ್ಯುತ್ತಮ ಬುದ್ಧಿಯನ್ನು ಪ್ರೇರಿಸು, ಪ್ರಚೋದಿಸು ಅಮ್ಮನವರ ಅಡೆದಾವರೆಗಳಿಗೆ ಅನಂತಾನಂತ ಒಂದನೆಗಳು.
*✍🏽✍🏽✍🏽ನ್ಯಾಸ.....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments