*ಏಶೋದೆ ನಿನ್ನ ಕಂದಗೇಸು ರೂಪವೇ ಏ ಸುರೂಪವೇ.....*

*ಏಶೋದೆ ನಿನ್ನ ಕಂದಗೇಸು ರೂಪವೇ ಏ ಸುರೂಪವೇ.....*

ಅನಂತ ರೂಪ ಗುಣ ಕ್ರಿಯೆಗಳಿಂದ ಅಭಿನ್ನ ನಮ್ಮ ನಾರಾಯಣ. ಆ ನಾರಾಯಣ ಹೊತ್ತು ರೂಪಗಳೂ ಅನಂತಾನಂತ. ಅವುಗಳಲ್ಲಿ ಕೃಷ್ಣಾವತಾರವೂ ಒಂದು.

ಬ್ರಹ್ಮದೇವರಿಂದಾರಂಭಿಸಿ ಯಾವತ್ತೂ ಜೀವರೂ ಸೃಷ್ಟಿಗೆ ಬರುವದು ಪಡೆಯುವದಕ್ಕಾಗಿಯೇ, ಅಂದರೆ ತಮಗೋಸ್ಕರವಾಗಿಯೇ. ಆದರೆ ನಮಗೋಸ್ಕರ, ನಮ್ಮ ಉದ್ಧಾರಕ್ಕೋಸ್ಕರ ಬರುವವನು ದೇವರು ಮಾತ್ರ. ಇದು ದೇವರ ಒಂದು *ಅನಂತ ಕರುಣಾ ರೂಪ.*

ಅನಂತ ಕರ್ಮಗಳನ್ನು ಹೊತ್ತು, ಅನಂತ ಆನಂದವನ್ನು ಪಡೆಯಲು ಹಂಬಲಿಸಿ ನಾವು ಭುವಿಗಿಳಿದು ಬಂದರೆ, ಯಾವ ಕರ್ಮಗಳ ಭಾರವಿಲ್ಲದೇ ಸ್ವಯಂ ಅನಂತ ಆನಂದ ರೂಪನಾಗಿ ಬಂದು, ಅನಂತ ಆನಂದ ರೂಪನಾಗಿಯೇ ಇದ್ದು, ಅನಂತ ಆನಂದ ರೂಪನಾಗಿಯೇ ಉಳಿಯುವವನು ನಮ್ಮ ಕೃಷ್ಣನ ಎರಡನೇಯದಾದ *ಭವ್ಯಸ್ವರೂಪ .*

ಭೀಮ, ಅರ್ಜುನ, ಉದ್ಧವ, ಮೈತ್ರೇಯರು ಮೊದಲಾದವರನ್ನು ಇಟ್ಟುಕೊಂಡು ಸಮಗ್ರ ಜಗತ್ತಿಗೇ ಗೀತೆ ಭಾಗವತ ಮೊದಲಾದ ದಿವ್ಯಜ್ಙಾನವನ್ನು ದಯಪಾಲಿಸಿದ *ಅನಂತಜ್ಙಾನ ರೂಪ* ಮೂರನೇಯದು.

ಪೂತನೆ, ಶಕಟ, ಕಂಸ ನರಕ ಶಿಶುಪಾಲ ದಂತವಕ್ತ್ರ ಮೊದಲಾದ ಮಹಾ ಮಹಾ ದೈತ್ಯರನ್ನು ಸ್ವಯಂ ತಾನು ಸಂಹರಿಸಿ, ಜರಾಸಂಧ ದುರ್ಯೋಧನ ಬಕಾಸುರ ದುಃಶ್ಶಾಸನ ಮೊದಲಾದವರನ್ನು ಪಾಂಡವರ ಮುಖಾಂತರ ಸಂಹರಿಸಿರುವ *ಮಹಾ ಬಲರೂಪ* ನಾಲಕನೇಯದು.

ಯಶೋದೆ, ನಂದ, ರೋಹಿಣೀ ಮೊದಲು ಮಾಡಿ ಸಕಲ ಗೋಪಾಲಕರಿಗೂ ಹಾಗೂ ಗೋಪಿಕಾಸ್ತ್ರೀಯರಿಗೂ ದಿವ್ಯವಾದ, ಅದ್ಭುತವಾದ, ಮನಮೋಹಕ, ಮೋಕ್ಷಪ್ರದ ಲೀಲೆಗಳನ್ನು ತೋರಿಸಿದ *ಲೀಲಾರೂಪ* ಐದನೇಯದು.

ಸಾಧಿಸಲು ಉದ್ದೇಶಿಸಿದ ಭೂಭಾರ ಹರಣವನ್ನು ಹುಟ್ಟಿದ ಕ್ಷಣದಿಂದ ಆರಂಭಿಸಿ, ಪರಂಧಾಮಕ್ಕೆ ಹೋಗುವ ಪೂರ್ವ ಕ್ಷಣದವರೆಗೂ ಮುನ್ನಡೆಸಿ, ಅಂತಿಮ ಕ್ಷಣದಲ್ಲಿ ಕೊನೆಗಾಣಿಸಿದ ಮಹಾವೀರನಾದ ಕೃಷ್ಣನ *ವೀರರೂಪ* ಆರನೇಯದು.

ರಾಜಕಾರಣಿ ಹೇಗಿರಬೇಕು, ರಾಜಕಾರಣ ಹೇಗೆ ಮಾಡಬೇಕು, ಮಾಡುವ ರಾಜಕಾರಣ ಯಾವಮಟ್ಟದಲ್ಕಿ ಇರಬೇಕು, ಆ ರಾಜಕಾರಣದಲ್ಲಿ ನಾವು ಹೇಗೆ ಯಶಸ್ವಿಯಾಗಿರಬೇಕು ಎನ್ನುವದನ್ನು ತೋರಿಸಿಕೊಟ್ಟ ಮಹಾ ಮತ್ಸದ್ದಿ *ರಾಜಕಾರಣಿ ರೂಪ* ಏಳನೇಯದು.

ಅನಂತಾನಂತ ಭಕ್ತರಿಗೂ ಪರಮ ಸ್ನೇಹ ಸುರಿಸುವ, ಸ್ನೇಹಕ್ಕೆ ಕಾರಣವಾದ ಅನಂತ ಗುಣಯುಕ್ತವಾದ, ಭಕ್ತಿಯ ಪರಾಕಾಷ್ಠೆಯನ್ನು ಕೊಡುವ ಮುಖಾಂತರ ಅನಂತ ಆನಂದವನ್ನೀಯುವ *ಮುಕ್ತಿಪ್ರದ ರೂಪ* ಎಂಟನೇಯ ರೂಪ.

ರುಕ್ಮಿಣಿ ಸತ್ಯಭಾಮೆ. ರೋಹಿಣೀ ಮೊದಲಾದ ಷಣ್ಮಹಿಷಿಯರು. ಇನ್ನುಳಿದ ಹದಿನಾರು ಸಾವಿರದ ಆರನೂರು ಜನ ಮಡದಿಯರಿಗೆ ಸೌಖ್ಯ ಸುರಿಸುವ *ಅನಂತ ಆನಂದ ರೂಪ* ಒಂಭತ್ತನೇಯದು.

ಪ್ರದ್ಯುಮ್ನ ಸಾಂಬ ಚಾರುದೇಷ್ಣ ಮೊದಲು ಮಾಡಿ ಲಕ್ಷ ಲಕ್ಷ ಸಂತಾನವನ್ನು ಪಡೆದು, ಅನಂತ ಜೀವರಿಗೆ ಸಂತವನ್ನು ಕೊಡುವ, ಸಂತತಿಗಳಾಗಿ ಹುಟ್ಟಿದ ನಮ್ಮಲ್ಲರಿಗೂ ಕಾರಣನಾದ *ಸಂತಾನ ಗೋಪಾಲಕೃಷ್ಣ ರೂಪ* ಹತ್ತನೇಯದು.

ಈ ರೀತಿಯಾಗಿ ಕೃಷ್ಣಪರಾಮಾತ್ಮನ ಒಂದೇ ರೂಪದಲ್ಲಿಯೇ ಅನಂತರೂಪಗಳಿವೆ. ಅನಂತರೂಪಗಳನ್ನೊಳಗೊಂಡ ರೂಪವೇ ನಮ್ಮ ಕೃಷ್ಣ ರೂಪ. ಅಂತೆಯೇ ದಾಸರಾಯರು *ಒಂದುರೂಪದೊಳು ಅನಂತ ರೂಪಗಳು ಪೊದಿಪ್ಪವು ಗುಣಗಣ ಸಹಿತ* ಎಂದು ಹೇಳಿದರು. ಅಂತಹ ಕೃಷ್ಣಾವತಾರದ ದಿನ ಇಂದಿದೆ.

ಸಂಸಾರದ ಪ್ರಪಾತಕ್ಕೆ ಕಾರಣರಾದವರುಗಳ ಹುಟ್ಟುಹಬ್ಬವನ್ನು ಅತ್ಯಂತ ವೈಭವದಿಂದ ಮಾಡುವ ನಾವು, ಸಂಸಾರತಾರಕ, ಅನಂತ ಆನಂದಪ್ರದ ಶ್ರೀಕೃಷ್ಣನ ಜನ್ಮದಿನದ ಜಯಂತೀ ಮಹೋತ್ಸವವನ್ನು ಎಷ್ಟು ವೈಭವದಿಂದ ಆಚರಿಸಬಹುದು ಎಂದು ಈಗಿನಿಂದಲೇ ಯೋಚಿಸಿ, ಶಾಸ್ತ್ರೋಕ್ತರೀತಿಯಲ್ಲಿ ಉಪವಾಸ, ಅರ್ಘ್ಯ, ಪೂಜೆ, ಕನಿಷ್ಠ ಸಾವಿರೆಂಟು ಸಲವಾದರೂ ಕೃಷ್ಣಮಂತ್ರಜಪ, ಅಚ್ಯುತಾನಂತಗೋವಿಂದ ಮಂತ್ರಜಪ,  ಮೊದಲಾದವುಗಳನ್ನು ಮಾಡುವ ಮುಖಾಂತರ ನಾವೆಲ್ಲರೂ ಸೇರಿ ಅತ್ಯಂತ ವೈಭವದಿಂದ  ಆಚರಿಸೋಣ. ಭೈಷ್ಮೀ ಸತ್ಯಾ ಸಹಿತ ಕೃಷ್ಣನಿಗೆ ಪ್ರೀತಿಪಾತ್ರರಾಗೋಣ.

ಲೇಖನಗಳನ್ನು ಪ್ರೀತಿಯಿಂದ ಓದಿದ, ಮನಃ ಪೂರ್ವಕ ಪ್ರೋತ್ಸಾಹಿಸಿದ, ಅಭಿಮಾನದಿಂದ ಹರಿಸಿದ, ಎಲ್ಲರಿಗೂ *ಕೃಷ್ಣಜಯಂತೀ ಉತ್ಸವದ* ಪ್ರೀತಿಪೂರ್ವಕ ಹಾರ್ದಿಕ ಶುಭಾಷಯಗಳು.

*✍🏽✍🏽✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*