*ಹೇ ಶ್ರೀರಾಮ !! ನಿನ್ನ ನಾಮ ಒಂದಿದ್ದರೆ ಸಾಕೋ...*

*ಹೇ ಶ್ರೀರಾಮ !! ನಿನ್ನ ನಾಮ ಒಂದಿದ್ದರೆ ಸಾಕೋ...*

ಪ್ರೇಮ ಸುರಿಸುವ, ಪ್ರೇಮಭರಿತವಾದ, ಪಾಪ ಪರಿಹರಿಸುವ, ಮೋಕ್ಷಕೆ ಕರೆದೊಯ್ಯುವ ನಿನ್ನ *ರಾಮ* ಎಂಬ ನಾಮ ಒಂದೇ ಒಂದು ಇದ್ದರೆ ಸಾಕು.

ಹೇ ದೇವ !! ನೀ ಸಿಟ್ಟಾದರೆ ಆಗು, ನಿನ್ನಾಣೆ ಮಾಡಿ ಹೇಳ್ತೀನಿ "ನಿನ್ನ ಒಂದು ನಾಮದ ಬಲದಿಂದ ಏನಾದರೂ ಸಾಧಿಸಿಕೊಳ್ಳಬಲ್ಲೆ."

ನಿನ್ನ ನಾಮವೇನಿದೆ ಬಹಳ ವಿಚಿತ್ರ. ಯಾವಾಗಲೂ ನನ್ನ ಜೊತೆಗೆ ಬರುತ್ತದೆ. ನನ್ನ ಸಕಲ ಆಪತ್ತುಗಳಿಗೂ ರಾಮಬಾಣ ಎಂದರೆ ಅದು ರಾಮನಾಮ. ಸಂಸಾರ ಸಾಗರಕ್ಕೆ ತಾರಕ ನೌಕೆ ಎಂದರೆ ಅದು ರಾಮ ನಾಮ.

ಪಾರ್ವತಿ  ಮತ್ತು ಶಿವ ಇಬ್ಬರೂ ಮಾತಾಡ್ತಾ ಕೂತಿರುತ್ತಾರೆ. ಆ ಸಮಯದಲ್ಲಿ ಪಾರ್ವತಿ ಕೆಲ ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾಳೆ.

ಪಾ..) ಜಗತ್ತು ನಿಮಗೆ ತಲೆ ಬಾಗತ್ತೆ, ಆದರೇ ನೀವು ಭಕ್ತರಿಗೆ ತಲೆ ಬಾಗುತ್ತೀರಲ್ಲ ಏನಕ್ಕೆ..... ???
ಶಿ..) ಜಗತ್ತಿನಲ್ಲಿ ವೈಷ್ಣವೋತ್ತಮ ನಾನೆ ಅದರಲ್ಲಿ ಸಂಶಯವೆಳ್ಳಷ್ಟೂ ಇಲ್ಲ. ಆದರೆ ವಿಷ್ಣುಸಹಸ್ರನಾಮ ಸಮವಾದ *ಶ್ರೀರಾಮ ನಾಮ* ಯಾರ ಕಂಠಭೂಷವಾಗಿದೆಯೋ ಅವರು ಎಂದಿಗೂ ನನ್ನಿಂದ ಮಾನ್ಯರೇ ಆಗಿದ್ದಾರೆ. ಇದು ಅವರ ಮಹಿಮೆಯಲ್ಲ. ಶ್ರೀ ರಾಮನಾಮದ ಮಹಿಮೆ.

ಪಾ...) ಸ್ಮಶಾನವಾಸಿಗಳಾಗಿ, ಹೆಣದ ಭಸ್ಮ ಧರಿಸುತ್ತೀರಲ್ಲ ಅದು ಏನಕ್ಕೆ... ??
ಶಿ...) ಸ್ಮಶಾನಕ್ಕೆ ಬರುವ ವ್ಯಕ್ತಿಗಳು ಸುಖಾ ಸುಮ್ಮನೆ ಬರಲ್ಲ, ಬರುತ್ತಿರುವಾಗ *ರಾಮ ರಾಮ ರಾಮ* ಅಥವಾ *ನಾರಾಯಣ ನಾರಾಯಣ ನಾರಾಯಣ* ಎಂದು ಹೇಳುತ್ತಾ ಬರುತ್ತಿರುತ್ತಾರೆ. ರಾಮ ನಾರಾಯಣ ಮಂತ್ರಗಳು ನನಗೆ ಅತ್ಯಂತ ಪ್ರಿಯ. ಆದ್ದರಿಂದ ರಾಮ ಮಂತ್ರವನ್ನು ಕೇಳಲು ಎಲ್ಲಿದ್ದರೂ ಓಡಿ ಬರುವೆ.

ಇಷ್ಟು ಜನರಿಂದ ರಾಮ ನಾರಾಯಣ ಮಂತ್ರಗಳ ಉಚ್ಚರಣೆಗೆ ಕಾರಣವಾದ ಈ ವ್ಯಕ್ತಿಯ ಹೆಣವನ್ನೂ ನಾನು ಅಷ್ಟೇ ಗೌರವದಿಂದ ನೋಡುತ್ತೇನೆ. ಆ ಹೆಣದ ಭಸ್ಮಧರಿಸಿ ಸಮ್ಮಾನವನ್ನೂ ಕೊಡುತ್ತೇನೆ.

ಪಾ..) ಯಾಕಿಷ್ಟು ರಾಮ ಮಂತ್ರದ ಮೇಲೆ ಅಭಿಮಾನ‌... ??
ಶಿ....) ನಾನು ಶಿವ ಮಂಗಳಸ್ವರೂಪಿ ಎಂದು ಆಗಿರುವದೇ  ಈ ರಾಮ ಮಂತ್ರದ ಬಲದಿಂದ. ನಿರ್ದುಷ್ಟನಾಗಿ, ಆ ಕಾರಣದಿಂದಲೇ ಗುಣವಂತರ ಪಟ್ಟಿಯಲ್ಲಿಯೇ ಮೂರನೇಯ ಸ್ಥಾನದಲ್ಲಿ ಅಲಂಕೃತನಾಗಿ, ವೈಷ್ಣವೋತ್ತಮ ಎಂದಾಗಿರುವದೇ *ಈ ರಾಮ ಮಂತ್ರದ ಬಲದಿಂದ.*

ಹೇ ಶಿವೆ.. !! ಆ ಮಂತ್ರ ಈ ಮಂತ್ರ ಜಪಿಸುವದಕ್ಕಿಂತೂ "ರಾಮ" ಮಂತ್ರಜಪಿಸು. ನಮ್ಮ ಎಲ್ಲ ಕರ್ಮಗಳನ್ನೂ ಝಾಡಿಸಿ ತೊಳೆಯುವ ಮಂತ್ರ ರಾಮ ಮಂತ್ರ.  ನಿನ್ನ ಜೀವನ ಸಾರ್ಥಕವಾಗುವದೂ ಈ ರಾಮ ಮಂತ್ರದಿಂದಲೆ. ನೀನೂ *ಶಿವಾ ಶಿವಾಣೀ* ಎಂದು ಪ್ರಸಿದ್ಧಳಾಗು ಎಂದು ಉತ್ತರಿಸಿ ರಾಮ ಮಂತ್ರ ಜಪದಲ್ಲಿ ಶಾಂತರಾಗಿ ಆಸೀನರಾದರು ರುದ್ರದೇವರು.

ಎನ್ನೊಡೆಗೆ ವೈಕುಂಠದ ವರೆಗೆ ಸಾಗಿ, ಪರಮಾನಂದನೀವ, ನಿನ್ನ ರಾಮ ನಾಮ  ಸ್ಮರಣೆಯೆಂಬುವದೇ  ಎನ್ನ ಜೀವಕೆ ಜೀವ.  ವರವ ಕೊಡುವದೇ ನಿನ್ನ ಕೆಲಸ. *ಮುನಿದರೇ ಮುನಿ ಶ್ರೀ ರಾಮ ನಿನ್ನಾಣೆ*  ನಿನ್ನ ನಾಮ ಒಂದೇ ಎನಗೆ ಸಾಕು. ಎಂದು ಪುರಂದರ ದಾಸರು ರಾಮಮೇಲೆಯೇ ಆಣಿ ಹಾಕುತ್ತಾರೆ. ಅಂತಹ ಶ್ರೇಷ್ಠ ಉತ್ತಮ, ಸರ್ವತಾರಕ ಮಂತ್ರ ರಾಮ ನಾಮ.

*✍🏽✍🏽✍ನ್ಯಾಸ.....*
ಗೋಪಾಲ‌ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*