*ಮಲಖೇಡ ನಿವಾಸ ಶ್ರೀಮಜ್ಜಯತೀರ್ಥರು

*ಮಲಖೇಡ ನಿವಾಸ ಶ್ರೀಮಜ್ಜಯತೀರ್ಥರು





ಶ್ರೀಮಜ್ಜಯತೀರ್ಥರ ಮಧ್ಯಾರಾಧನಾ ಮಹೋತ್ಸವ ಇಂದು.

*ಟೀಕಾಕೃತ್ಪಾದರು*

ಶ್ರೀಮದಾಚಾರ್ಯರ ಬ್ರಹ್ಮಸೂತ್ರಭಾಷ್ಯ, ಅನುವ್ಯಾಖ್ಯಾನ ಮೊದಲಾದ ಕೃತಿಗಳಿಗೆ ಟೀಕೆಗಳನ್ನು ಬರೆದುಕೊಟ್ಟ ಮಹಾನ್ ಆಚಾರ್ಯ ಶ್ರೀಮಟ್ಟೀಕಾಚಾರ್ಯ. ಅನೇಕ ಮತ ಸಂಪ್ರದಾಯಗಳಲ್ಲಿ ಅನೇಕ ಮೂಲಕೃತಿಗಳಿಗೆ ಟೀಕೆಯನ್ನು ಬರೆದ ಟೀಕಾಕಾರರು ಬಂದಿದ್ದಾರೆ, ಆದರೆ ಇಂದಿಗೂ ಟೀಕಾರಾಯರು ಎಂದರೆ ನಮ್ಮ ಟೀಕಾರಾಯರು ಮಾತ್ರ.
ಅನೇಕ ಮತಗಳಲ್ಲಿ ಹಿಂದಿನ ಹಿಂದಿನ ಟೀಕಾಗ್ರಂಥಗಳನ್ನು, ಟೀಕಾಕಾರರನ್ನು ಖಂಡನೆ ಮಾಡಿ ಸ್ವತಂತ್ರಟೀಕಾಗ್ರಂಥಗಳನ್ನು ರಚಿಸಿದ್ದು ಕಂಡುಬರುತ್ತದೆ. ಆದರೆ ನಮ್ಮ ಮತದಲ್ಲಿ ಮಹಾ ಜ್ಙಾನಿಗಳು, ಅಪರೋಕ್ಷಜ್ಙಾನಿಗಳು, ದೇವಾಂಶಸಂಭೂತರೇ ಭುವಿಗಿಳಿದು ಬಂದಿದ್ದರೂ ಟೀಕಾಗ್ರಂಥಗಳನ್ನೋ, ಟೀಕಾಚಾರ್ಯರನ್ನೋ ವಿಮರ್ಶಿಸುವ ಗೋಜಿಗೂ ಹೋಗಲಿಲ್ಲ. ಇದುವೇ ಶ್ರೀಮಟ್ಟೀಕಾಕೃತ್ಪಾದರ ಒಂದು ದಿವ್ಯ ಭವ್ಯ ವೈಭವ.

*ಯದುರಾರೈ ಗುರುವೇ ಸಮರಾರೈ*

ಶ್ರೀಮಟ್ಟೀಕಾಕೃತ್ಪಾದರ ಯಾವೊಂದು ಮಾತಿಗೂ ಪರವಾದಿಗಳಲ್ಲಿ ಎದುರಾಗಿ ನಿಂತು ಖಂಡಿಸುವ ಒಂದು ಮಾತೂ ಜಗತ್ತಿನಲ್ಲಿ ಬರಲಿಲ್ಲ. ಪ್ರತಿವಾದಿಗಳಲ್ಲೂ ಮೂಡಲಿಲ್ಲ.  ಟೀಕಾರಾಯರ ಯಾವ ಮಾತಿಗೂ ಸಮವಾದ ಮಾತು ಸ್ವಮತದಲ್ಲಿ ಒಂದೂ ಹುಟ್ಟಿ ಬರಲಿಲ್ಲ. ಅಂತೆಯೇ ಶ್ರೀವ್ಯಾಸರಾಯರ ಒಂದದ್ಭುತ ನುಡಿ *ಯದುರಾರೈ ಗುರುವೇ ಸಮರಾರೈ*  ಎಂದು. ಪರವಾದಿಗಳಲ್ಲಿ ನಿಮಗೆ  ಎದುರು ಯಾರಿದ್ದಾರೆ ... ಸ್ವಮತೀಯರಲ್ಕಿ ನಿಮಗೆ ಸಮಾರಾರು.... ಎಂದು ಉದ್ಗಾರ ತಗೆದರು.

*ಶ್ರೀಕರೋಯಂ ಗ್ರಂಥಃ | ತತ್ರ ವಯಮೇವ ಸಾಕ್ಷಿಣಃ*

ಶ್ರೀವಾದಿರಾಜ ಮಹಾಪ್ರಭುಗಳು ಹೇಳುತ್ತಾರೆ ಇಹದಲ್ಲಿ ಬೇಕಾದ ಐಶ್ವರ್ಯ, ಪರದಲ್ಲಿ ಮೋಕಾದ ಮೋಕ್ಷಾದಿರೂಪ ಶ್ರೀಯನ್ನೇ ತಂದೊದಗಿಸುತ್ತದೆ ಶ್ರೀಮನ್ಯಾಯ ಸುಧಾ ಗ್ರಂಥ ಎಂದು ತಿಳಿಸುತ್ತಾರೆ.

*ಅನೇಕಾರ್ಥಗಳಿಂದ ಕೂಡಿದ ಮಹಾಗಣಿ*

ಮಂತ್ರಾಲಯ ನಿವಾಸಿಗಳಾದ ಗುರುಸಾರ್ವಭೌಮರು *ಪ್ರತಿವಾಕ್ಯಂ ಪ್ರತಿಪದಂ ಅನೇಕಾಕೂತಿ ಗರ್ಭಿತಾ | ಸುಧಾ* ಶ್ರೀಮನ್ಯಾಯ ಸುಧೆಯ ಪ್ರತಿ ವಾಕ್ಯವೂ, ಪ್ರತಿಯೊಂದು ಪದವೂ ನೂರಾರು ಸಾವಿರಾರು ಕೋಟಿಕೋಟಿ ಅರ್ಥಗಳಿಂದ ಒಡಗೂಡಿದೆ ಎಂದು ಹೇಳುತ್ತಾರೆ.

ಮತ್ತೊಂದೆಡೆ ಇದೇ ಗುರುಸಾರ್ವಬೌಮರು ಹೇಳುತ್ತಾರೆ *ಟೀಕಾಗಾಂಭೀರ್ಯಮುದ್ಧರ್ತುಂ ವ್ಯಾಸತೀರ್ಥಾದಯಃ ಕ್ಷಮಾಃ* ಈ ವಾಕ್ಯಗಳನ್ನು ಅರ್ಥಮಾಡಿಕೊಳ್ಳಲು ಅಥವಾ ಈ ವಾಕ್ಯಗಳ ಆಳದಲ್ಲಿ ಇರುವ ಗಾಂಭೀರ್ಯವನ್ನು ಎತ್ತಿ ತೋರಿಸಲು  ಶ್ರೀವ್ಯಾಸರಾಯರಂತವರೇ ಸಮರ್ಥರು. ಶ್ರೀಟೀಕಾರಾಯರ ಹಾಗೂ ವ್ಯಾಸರಾಜರ  ಕೃಪಾಲೇಶ ಇರುವದರಿಂದ ಸ್ವಲ್ಪ ತಿಳಿದಿದೆ ಸ್ವಲ್ಪವ್ಯಾಖ್ಯಾನ ಮಾಡುವೆ ಎಂದೂ ಹೇಳುತ್ತಾರೆ ರಾಯರು.

*ಸಂಸಾರ ತಾರಕ*

*ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಕ್ ಭವತೀತಿ ಮತಿರ್ಹಿ ಮಮ* ಶ್ರೀಮಟ್ಟೀಕಾಕೃತ್ಪಾದರ ಒಂದೊಂದು ವಾಕ್ಯ ಪದಗಳ‌ ಸ್ಪಷ್ಟ ಅರ್ಥಗಳನ್ನು ತಿಳಿದುಕೊಂಡ ವ್ಯಕ್ತಿ ಇನ್ನೆಂದಿಗೂ ಸಂಸಾರಕ್ಕೆ ಬರ. ಆ ವ್ಯಕ್ತಿಯ ಪುಣ್ಯಕ್ಕೆ ಸಮವೇ ಮತ್ತೊಂದಿಲ್ಲ. ಮಿಗಿಲು ಅನ್ನುವದು ದೂರದ ಮಾತು ಎಂದು ಅಡವಿ ಆಚಾರ್ಯರು ಎಂದೇ ಪ್ರಸಿದ್ಧರಾದ ಶ್ರೀವಿಷ್ಣುತೀರ್ಥರು ಹೇಳುತ್ತಾರೆ.

*ಸಕಲವಿಧ ಅಪಾರ ಪುಣ್ಯಪ್ರದ ಗ್ರಂಥಗಳು ಟೀಕಾಗ್ರಂಥಗಳು*

ಸಹಸ್ರ ಸಹಸ್ರವರ್ಷ ನಿರಂತರ ತಪಸ್ಸು ಮಾಡಿದರೆ ಏನುಫಲವಿದೆ, ನಿರಂತರ ಗುರುಭಕ್ತಿ ಮಾಡಿದ್ದರ ಫಲ, ನಿರಂತರ ವನವಾಸಾದಿಗಳನ್ನಿ ಮಾಡಿದರೆ ಬರುವ ಫಲ ಹೀಗೆ ನಾನಾವಿಧ ಪುಣ್ಯ *ಸುಧಾ ತತ್ವಪ್ರಕಾಶಿಕಾ* ಮೊದಲಾದ ಗ್ರಂಥಗಳ ಒಂದೊಂದು ಪದದ ಅಧ್ಯಯನದಿಂದ ಬರುತ್ತದೆ. ಎನ್ನುತ್ತಾರೆ ವಿಷ್ಣುತೀರ್ಥರು.

*ಸಂಸಾರ ಸಾಗರ ನೌಕೆ*

ಅತ್ಯಂತ ಘೋರವಾದ ಪಾತಕ ಪಾಗಳಿಂದಲೇ ಕೂಡಿದ ಈ ಸಂಸಾರಸಾಗರವನ್ನು ಪಾರುಮಾಡುವ ನಾವು ಹಡಗು ಎಂದರೆ ಅದು ಶ್ರೀಮಟ್ಟೀಕಾಕೃತ್ಪಾದರ ಪಾದಕಮಲಗಳು ಎಂದು ವಿಜಯದಾಸರು ತಿಳಿಸುತ್ತಾರೆ.

*ದೋಷದೂರರು*

ನಿರ್ದುಷ್ಟರಾದ ಆದಿಶೇಷದೇವರ ಆವೇಶ ಇರುವದರಿಂದಲೇ ಶ್ರೀಮಟ್ಟೀಕಾಕೃತ್ಪಾದರು ನಿರ್ದುಷ್ಟರು. ಅವರಲ್ಲಿ ಒಂದೂ ದೋಷಗಳು ಇಲ್ಲದೇ ಇರುವದರಿಂದಲೇ ಪ್ರತಿವಾಕ್ಯವೂ ಪರಮ ಶುದ್ಧ. ಅಂತೆಯೇ  ವಿಜಯದಾಸರ ಮಾತು *ದೋಷದೂರರ ಆದಿಶೇಷಾವೇಶರ* ಎಂದು.

*ದೋಷಕಳೆವ ಮಹಾಪ್ರಭುಗಳು*

ಮನುಷ್ಯನನ್ನು ದೂಷಿತನನ್ನಾಗಿ ಮಾಡುವದೇ ಕಾಮ ಕ್ರೋಧ ಮೊದಲಾದ ದೋಷಗಳು. ಈ ಎಲ್ಲ ದೋಷಗಳು ಇಲ್ಲದರಿವದರಿಂದಲೇ *ಕಾಮಗೆದ್ದರಾ* ಎಂದು ಸಂಬೋಧಿಸಿದರು ವಿಜಯದಾಸರು.

*ದೇವರೇ ಇವರನ್ನು ಪ್ರೀತಿಸುತ್ತಾನೆ*

ಕಾಮ ಒಂದನ್ನು ಗೆದ್ದರೂ ಎಂದಾದರೆ ಎಲ್ಲ ದೋಷಗಳನ್ನೂ  ಗೆದ್ದಂತೆಯೇ ಸರಿ. ಕಾಮಗೆಲ್ಲುವ ಮುಖಾಂತರ  ಎಲ್ಲ ದೋಷಗಳನ್ನೂ ಗೆದ್ದ, ಅಂತೆಯೇ ನಿರ್ದುಷ್ಟರಾದ ಮಹಾಮಹಿಮರು ಶ್ರೀಮಟ್ಟೀಕಾಕೃತ್ಪಾದರು. ಆ ಕಾರಣದಿಂದಲೇ ಶ್ರೀಹರಿಗೇನೇ *ಪ್ರೇಮಪೂರ್ಣರು* ಎಂದಾದರು. ಸ್ವತಹ ದೇವರೇ ಇವರನ್ನು ಪ್ರೀತಿಸುವಷ್ಟು ನಿರ್ದುಷ್ಟತಮರು ಶ್ರೀಮಟ್ಟೀಕಾಕೃತ್ಪಾದರು.

*ಕಾಮಾದಿ ದೋಷ ಪರಿಹಾರಕರು*

ಕಾಮಾದಿಗಳನ್ನು ಗೆದ್ದ ಶ್ರೀಮಟ್ಟೀಕೃತ್ಪಾದರಂಥ  ಮಹಾಪ್ರಭುಗಳನ್ನು  ಆಶ್ರಯಿಸಿದರೆ ಮಾತ್ರ, ಕಾಮಾದಿಗಳ ಗೆಲವು ಸಾಧ್ಯ. ಇದನ್ನು ಸಾಧಿಸಿ ತೋರಿಸಿದ ಮಹಾತ್ಮರು ಚತುಃಷಷ್ಠಿ ಕಲಾಪೂರ್ಣರಾದ ಶ್ರೀವಿಜಯೀಂದ್ರತೀರ್ಥರು.

*"ಯಸ್ಯ ವಾಕ್ ಕಾಮಧೇನುರ್ನಃ ಕಾಮಿತಾರ್ಥಾನ್ ಪ್ರಯಚ್ಛತಿ | ಸೇವೇ ತಂ ಜಯಯೋಗೀಂದ್ರಂ ಕಾಮಬಾಣಚ್ಛಿದಂ ಸದಾ ||"*

ಶ್ರೀಮಟ್ಟೀಕಾಕೃತ್ಪದರ ಪ್ರತಿಯೊಂದು ಮಾತುಗಳೂ ಕಾಮಧೇನುವಿನಂತೆ ಸರ್ವಾಭೀಷ್ಟಪ್ರದವಾಗಿದೆ. ಅಂತೆಯೇ ನಮಗೂ ಕಾಮಿತಫಲಗಳನ್ನು ಈಡೇರಿಸುತ್ತವೆ. ಸಕಲಾಭೀಷ್ಟಗಳನ್ಮು ಪೂರೈಸುವ ಶ್ರೀಮಟ್ಟೀಕಾಕೃತ್ಪಾದರು ನಮ್ಮ ಕಾಮಬಾಣವನ್ನು ನಾಶಮಾಡಲಿ ಎಂದು ಪ್ರಾರ್ಥಿಸುತ್ತಾರೆ ಶ್ರೀವಿಜಯೀಂದ್ರತೀರ್ಥರು.

ಇಂದು ಮಹಾ ಪರ್ವಕಾಲದಲ್ಲಿ ಆ ಮಹಾಪ್ರಭುಗಳ ಚರಮಶ್ಲೋಕವನ್ನು ನಿರಂತರ ಪಠಿಸಿ ಆ ಮಹಾ ಗುರುಗಳ ಅನುಗ್ರಹಕ್ಕೆ ಭಾಗಿಯಾದರೆ ಮಾತ್ರ ಅವ ಭಾಗ್ಯವಂತ ಎಂದೆನ್ನುತ್ತಾರೆ *ಈ ಮುನಿ ಒಲಿದರೆ ಅವನೇ ಭಾಗ್ಯವಂತ* ವಿಜಯದಾಸರು.

*✍🏽✍🏽✍🏽✍🏽ನ್ಯಾಸ...*
(ಗೋಪಾಲದಾಸ.
ವಿಜಯಾಶ್ರಮ, ಸಿರವಾರ)

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*