*ತಸ್ಯ ಕುಕ್ಷಿಗತಾಃ ದೋಷಾಃ ಸರ್ವೇ ನಶ್ಯಂತಿ ತತ್ಕ್ಷಣಾತ್*
*ತಸ್ಯ ಕುಕ್ಷಿಗತಾಃ ದೋಷಾಃ ಸರ್ವೇ ನಶ್ಯಂತಿ ತತ್ಕ್ಷಣಾತ್*
ಶ್ರೀಶ್ರೀ೧೦೦೮ಶ್ರೀ ಶ್ರೀರಾಘವೇಂದ್ರಸ್ವಾಮಿಗಳ ೩೪೭ ನೇಯ ಆರಾಧನಾ ಮಹೋತ್ಸವ.
ಇಂದು ನಮ್ಮ ದೇಹ ಇಂದ್ರಿಯ ಮನಸ್ಸುಗಳು ಕಲುಷಿತವಾಗಿವೆ, ಕಲ್ಮಷವಾಗಿವೆ. ಕಲುಷಿತವಾದ ದೇಹೇಂದ್ರಿಯ ಮನಸ್ಸುಗಳು ಇರುವದರಿಂದಲೇ ಸುತ್ತಲ ಪರಿಸರವೆಲ್ಲವೂ ಕಲುಷಿತವಾಗಿವೆ. ಸ್ವಚ್ಛಗೊಳಿಸುವ ಒಬ್ಬ ವ್ಯಕ್ತಿಯ ಆವಶ್ಯಕತೆ ತುಂಬ ಇದೆ. ಆ ವ್ಯಕ್ತಿಯೆ ಇಂದಿನ ಆರಾಧಕರಾದ ಗುರು ಸಾರ್ವಭೌಮರು.
*ಗುರು ಸ್ಮರಣೆಯಿಂದ ಆಪತ್ತು ಪರಿಹಾರ*
ಕಲುಷಿತ ಮನಸ್ಸೇ ಇಂದಿನ ಒಂದು ದೊಡ್ಡ ಆಪತ್ತು. ಆ ಆಪತ್ತಿನ ಪರಿಹಾರದ ಮಾರ್ಗವೇ ಗುರುಸ್ಮರಣೆ. ಇದುವೇ ದಾಸರೆಲ್ಲರ ಧರ್ಮವೂ ಸಹ ಆಗಿದೆ. ಆದ್ದರಿಂದ ನಿರಂತರ *ಶ್ರೀಗುರುಭ್ಯೋ ನಮಃ* *ಶ್ರೀರಾಘವೇಂದ್ರಾಯ ನಮಃ* ಎಂಬ ಮಂತ್ರಗಳ ನಿರಂತರ ಸಂಸ್ಮರಣೆ ಜಪ ಅತ್ಯವಶ್ಯಕ.
*ಯಃ ಪಿಪೇಜ್ಜಲಮೇತೇನ ಸ್ತೋತ್ರೇಣೈವ ಅಭಿಮಂತ್ರತಮ್*
ಕೇವಲ ಗುರುಮಂತ್ರದ ಜಪ ಮಾತ್ರವಲ್ಲದೇ *ನೀರನಲ್ಲಿ ಗುರುಸ್ತೋತ್ರವನ್ನು ಜಪಿಸುತ್ತಾ ಅಭಿಮಂತ್ರಣೆ ಮಾಡಿ, ಆ ಜಲವನ್ನು ಕುಡಿದರೆ ಆಯ್ತು* ಎಲ್ಲತರಹದ ಎಲ್ಲ ರೋಗಗಳೂ ದೇಹ ಇಂದ್ರಿಯ ಮನಸ್ಸಿನ ಸಕಲ ಕಲ್ಮಷಗಳೂ ಬೇರುಸಹಿತ ಸ್ವಚ್ಛವಾಗಿ ತೊಳೆದು ಹೋಗುತ್ತವೆ ಎಂದು ಅಪ್ಪಣ್ಣಾಚಾರ್ಯರು ತಿಳುಹಿಸುತ್ತಾರೆ.
ಜ್ಙಾನದ ವಿರೋಧಿಯಾದ ಅಜ್ಙಾನ ವಿಸ್ಮೃತಿ ಭ್ರಾಂತಿ ಸಂಶಯ ಅಪಸ್ಮೃತಿ ಆಲಸ್ಯ ತೊದಲ್ನುಡಿವಿಕೆ ಇವೇ ಮೊದಲಾದ ಸಕಲ ಇಂದ್ರಿಯ ದೋಷಗಳೂ ಪರಿಹಾರವಾಗುತ್ತದೆ. ಇಂದ್ರಿಯೋದ್ಭೂತ ದೋಷಗಳಲ್ಲದೆ *ಕಾಯಜಾನ್ ದೋಷಾನ್* ದೇಹೋದ್ಭೂತ ದೋಷಗಳೂ ನಾಶವಾಗುತ್ತದೆ.
*ಶ್ರೀರಾಘವೇಂದ್ರಾಯ ನಮಃ* ಎಂದು ನಿತ್ಯ ತ್ರಿಕಾಲದಲ್ಲಿ ನೂರೆಂಟು ಸಲದಂತೆ ಜಪಿಸುವದರಿಂದ ಸಕಲ ಇಷ್ಟಾರ್ಥಗಳೂ ನಿಸ್ಸಂಶಯವಾಗಿಯೂ ಈಡೇರುತ್ತವೆ ಎಂದು ಶ್ರೀ ಅಪ್ಪಣ್ಣಾಚಾರ್ಯರು ತಿಳುಹಿಸಿಕೊಡುತ್ತಾರೆ.
*ಸರ್ವಯಾತ್ರಾ ಫಲಾವಾಪ್ತ್ಯೈ ಯಥಾ ಶಕ್ತಿ ಪ್ರದಕ್ಷಿಣಮ್*
ಶ್ರೀಗುರು ಸಾರ್ವಭೌಮರ ಪ್ರದಕ್ಷಿಣೆ ಇಂದ ಕಾಶಿ ಗಯೆ ಪ್ರಯಾಗ ಬದರಿ ದ್ವಾರಕಾ ಉಡುಪಿ ಪಂಢರಪುರ ಮಲಖೇಡ ಮುಳುಬಾಗಿಲು ಮೊದಲಾದ ಸಕಲತೀರ್ಥಯಾತ್ರೆ ಮಾಡಿದ ಫಲ ಒದಗಿ ಬರುತ್ತದೆ.
*.......ವೃಂದಾವನಗತಂ ಜಲಮ್ | ಶಿರಸಾ ಧಾರಯಾಮ್ಯದ್ಯ ಸರ್ವತೀರ್ಥಫಲಾಪ್ನುಯಾತ್*
ವೃಂದಾವನಕ್ಕೆ ಅಭಿಷೇಕ ಮಾಡಿದ ಜಲದ ಪ್ರೋಕ್ಷಣೆ ಮಾಡಿಕೊಳ್ಳುವದರಿಂದ ಗಂಗಾ, ಅಲಕನಂದಾ ಯಮುನಾ ಗೋದಾ ಕೃಷ್ಣಾ ಭೀಮಾ ಕಾಗಿನಾ ತುಂಗಭದ್ರಾ ಮೊದಲಾದ ತೀರ್ಥಗಳ ಫಲ ಹಾಗೂ ಸ್ವಾಮಿಪುಷ್ಕರಣಿ ಮೊದಲಾದ ಸಕಲ ಪುಷ್ಕರಣಿಯ ಫಲವೂ ಒದಗಿ ಬರುತ್ತದೆ. ಹೀಗೆ ನೂರಾರು ಸಾವಿರಾರು ಫಲಗಳನ್ನು ಶ್ರೀರಾಘವೇಂದ್ರಸ್ತೋತ್ರದಲ್ಲಿ ಅಪ್ಪಣ್ಣಾಚಾರ್ಯರು ತಿಳುಹಿಸಿಕೊಡುತ್ತಾರೆ. ನಾವೂ ನಿತ್ಯ ೩ ಸಲ ಪಾರಾಯಣ ಮಾಡುವ ಸತ್ಸಂಕಲ್ಪವನ್ನು ಉತ್ತರಾರಾಧನೆಯದಂದು ಮಾಡೋಣ. ಗರುಗಳಿಗೆ ಪ್ರೀತಿಯಾಗೊಳಿಸುವ ಸತ್ಸಂಕಲ್ಪದೊಂದಿಗೆ ಇಂದಿನ ಈಲೇಖನ ರೂಪ ಪುಟ್ಟ ಕಾರ್ಯವನ್ನು ಗುರುಗಳಿಗೆ ಸಮರ್ಪಿಸುವೆ.
*✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments