*ಜನಿವಾರ ಧಾರಣೆಯ ಮಹತ್ವ.....*

*ಜನಿವಾರ ಧಾರಣೆಯ ಮಹತ್ವ.....*

ಬ್ರಾಹ್ಮಣನೆಂದೆನಿಸಿ ವೇದಾಧ್ಯಯನಿಗಳನ್ನು ಮಾಡುವ ಯೋಗ್ಯನಿಗೆ ಉತ್ಸರ್ಜನ ಉಪಾಕರ್ಮಗಳು ಇವು ತುಂಬ ಮಹತ್ವದ್ದು. ವೇದಾಧ್ಯಯನವನ್ನು ಗುರುಗಳಿಗೆ ಅರ್ಪಸಿವದು ಉತ್ಸರ್ಜನ ಎಂದಾದರೆ, ವೇದಗ್ರಹಣ ಮಾಡುವ ಕರ್ಮ ಉಪಾಕರ್ಮ ಎಂದು ಪ್ರಸಿದ್ಧ.  ವೇದಗ್ರಹಣ ಮಾಡಿದ ನಂತರ ನಿರಂತರ ಒಂದೂ ದಿನ ತಪ್ಪದೆ ಆರು ತಿಂಗಳ ವರೆಗೆ ಪಾಠ ಹೇಳಿಸಿಕೊಳ್ಳುತ್ತಾ ಅಧ್ಯಯನ ಮಾಡುವದು. ಆರು ತಿಂಗಳ ನಂತರ ಉತ್ಸರ್ಜನವನ್ನು ಮಾಡಿ, ನಂತರ ಕಲಿತ ಪಾಠದ ಚಿಂತನೆ. (ಇಂದು ಉತ್ಸರ್ಜನ ಹಾಗೂ ಉಪಾಕರ್ಮ ಎರಡೂ ಒಂದೇ ದಿನ ಮಾಡಿಕೊಳ್ಳಿತ್ತೇವೆ.)

ವೇದಾಧ್ಯಯನಕ್ಕೆ ಅಧಿಕಾರ ಸಿಗುವದೇ ಉಪನಯನದ ನಂತರ. ಉಪನಯನ ಪ್ರಸಂಗದಲ್ಲಿ ಜನಿವಾರ ಧಾರಣೆ.   ಅಂದೇ ವೇದ ಶಾಸ್ತ್ರ ಅಧ್ಯಯನಗಳಿಗೆ ಹಾಗೂ ಗಾಯತ್ರೀ ಮೊದಲಾದ ಮಂತ್ರಗಳ ಜಪಕ್ಕೆ ಅಧಿಕಾರ.

 ಉಪದಿಷ್ಟ ಮಂತ್ರಗಳ ಜಪ, ವೇದಗಳ ಅಧ್ಯಯನ ೩ ದಿನ ತಪ್ಪಿಸಿದರೆ ಯಾತಯಾಮ ಎಂದಾಗುವದು. ಯಾತಯಾಮ ಆದರೆ ಪಾರಾಯಣ ಜಪ ಮಾಡಿದ್ದು (ಎಣಿಸಿದ್ದಕ್ಕೆ ಲೆಕ್ಖಕ್ಕೆ ಮಾತ್ರ)  ಒಂದೇ ಫಲ. ಮಂತ್ರಗಳ ಪೂರ್ಣ ಮಟ್ಟದ ಫಲಕ್ಕೆ ಯಾತಯಾಮ ಆಗದಿರುವ ಹಾಗೆ ನೋಡಿಕೊಳ್ಳುವದು ಅತ್ಯಂತ ಆವಷ್ಯಕ.

"ಬ್ರಹ್ಮ" ಎಂದರೆ ವೇದ. ವೇದಗಳನ್ನು "ಅಣತಿ" ತಪ್ಪದೆ ಪಠಿಸುವರು ಯಾರೋ ಅವರು ಬ್ರಾಹ್ಮಣ. ಬ್ರಾಹ್ಮಣ್ಯ ಉಳಿಸಿಕೊಳ್ಳುವ, ಬೆಳಿಸಿಕೊಳ್ಳುವ   ಉತ್ತಮ ಯೋಗ್ಯ ದಿನ ಇಂದು.

ಜನಿವಾರ ಧಾರಣೆಯ ಮಹತಿ.

*ಮಮ ಬ್ರಾಹ್ಮಣ್ಯ ಸಿಧ್ಯರ್ಥಂ ವಹಾಮಿ ತ್ವಾಂ ಅತಂದ್ರಿತಃ | ಪಾವಿತ್ರ್ಯಂ ಬಲಮಾಯುಷ್ಯಂ ಶ್ರಿಯಂ ಕಾಂತಿಮರೋಗತಾ | ಹರಿ ತದ್ಭಕ್ತ ಸೇವಾಂ ಚ ಮಯಾ ಕಾರಯ ಮತ್ಪ್ರಿಯ ||*

ಹೇ ಯಜ್ಙೋಪವೀತಾಂತರ್ಗತ ನಾಗಾದಿ ದೇವತಾ, ರುದ್ರ, ಬ್ರಹ್ಮಾಂತರ್ಗತ ವಿಷ್ಣುವೇ !!!! ನಿನಗೆ ನಮೋ ನಮಃ.  ನಾನು ಬ್ರಹ್ಮಣನಾಗಿರಬೇಕು. ಕೇವಲ  ಜನಿವಾರ ಧಾರಣೆ ಮಾತ್ರದಿಂದ ಬ್ರಾಹ್ಮಣ ಎಂದಾಗದೆ, ವೇದಾಧ್ಯಯನ, ಪಾರಾಯಣ, ಗಾಯತ್ರೀ ಮೊದಲಾದ ಜಪಗಳನ್ನು ತಪ್ಪದೇ ಮಾಡುತ್ತಾ ನಿಜವಾದ ಬ್ರಾಹ್ಮಣ ಎಂದಾಗಲು ನಿಮ್ಮನ್ನು ಯಜ್ಙೋಪವೀತ (ಜನಿವಾರ) ರೂಪದಲ್ಲಿ ಧರಿಸುವೆ.

ನನ್ನನ್ನು ಹಾಳುಮಾಡುವಂತಹದ್ದು ಅಪಾವಿತ್ರ್ಯತೆ, ಅಯಶಸ್ಸು ಮತ್ತು  ತೇಜೋ ಹೀನತೆ ಇವುಗಳು. ನನ್ನ ದೇಹ, ಮನಸ್ಸು, ಇಂದ್ರಿಯಗಳು, ಪವಿತ್ರವಾಗಿ ಇರುವಂತೆ ಮಾಡು. ಇಂದ್ರಿಯ ಮನಸ್ಸು ಮತ್ತು ದೇಹಗಳು ಪವಿತ್ರವಾಗಿ ಇದ್ದಷ್ಟು ನನ್ನ ಕೀರ್ತಿ ಹಾಗೂ ಕಾಂತಿ (ಮುಖದಖಳೆ) ಇವುಗಳು ಬೆಳೆಯುತ್ತಾ ಸಾಗುತ್ತದೆ.

ಪಾವಿತ್ರ್ಯತೆ ಧರ್ಮಕ್ಕೆ ಮೂಲ. ಧರ್ಮ ಮಾಡಿಷ್ಟು ದೇಹ ಇಂದ್ರಿಯ, ಮನಸ್ಸುಗಳಿಗೆ ಮಹಾ ಬಲಬರುತ್ತದೆ. ಬಲಿಷ್ಠನಾದಂತೆ ಆಯು ಮತ್ತು ಆರೋಗ್ಯ ಅಭಿವೃದ್ಧಿಸುತ್ತದೆ.

ಪಾವಿತ್ರ್ಯತೆ ಇಂದ ದೇಹ ಇಂದ್ರಿಯ ಮನಸ್ಸುಗಳ ಬಲ, ಆಯು, ಆರೋಗ್ಯ, ಯಶಸ್ಸು, ಕಾಂತಿ, ಇವುಗಳು ವೃದ್ಧಿಸಿದಾಗ ದೊರೆಯಲೇಬೇಕಾದ ಅತಿ ಮುಖ್ಯ ಫಲವೆಂದರೆ *ಹರಿ ಮತ್ತು ಹರಿದಾಸರ ಸೇವೆ.* ಹರಿದಾಸರ ಹಾಗೂ ಹರಿಯ ಸೇವೆ ಒಲಿದು ಬಂದಾಗ ಹರಿಯೇ ಒಲಿದು ಬಂದ ಎಂದರ್ಥ. ಹರಿ ಒಲಿದು ಬಂದಾಗ‌ ನಮ್ಮ ಕೈಯಲ್ಲೇ ಮುಕ್ತಿ.‌ ಇದು ಜನಿವಾರ ಧಾರಣೆಯ ಪ್ರಸಂಗದಲ್ಲಿಯ ಚಿಂತನೆ ಹಾಗೂ ವೈಭವ.

*ಧಾರಣೆಯ ಮಂತ್ರ*

*ಯಜ್ಙೋಪವೀತಂ ಪರಮಂ ಪವಿತ್ರಂ ಪ್ರಜಾಪತೇಃ ಯಃ ಸಹಜಂ ಪುರಸ್ತಾತ್ | ಆಯುಷ್ಯಮಗ್ಯ್ರಂ ಪ್ರತಿಮುಂಚ ಶುಭ್ರಂ ಯಜ್ಙೋಪವೀತಂ ಬಲಮಸ್ತು ತೇಜಃ||* ಎಂಬ ಮಂತ್ರದಿಂದ ಧರಿಸಿಬೇಕು.

ಬ್ರಹ್ಮದೇವರು ಮೊಟ್ಟಮೊದಲಿಗೆ ಸಹಜವಾಗಿ ತ್ರೈವರ್ಣಿಕರಿಗೆ ಕೊಟ್ಟ ಶುಭ್ರವಾದ ಯಜ್ಙೋಪವೀತ. ಯಜ್ಙೋಪವೀತ ಧಾರಣೆಯಿಂದ ಸಾರ್ಥಕ ಆಯುಷ್ಯ,  ಧರ್ಮೋಪಯುಕ್ತ ವಿಶಿ ಷ್ಟ ಬಲ, ದೈವೀತೇಜಸ್ಸು  ಸುಲಭದಲ್ಲಿ ಒಲೆದು ಬರುತ್ತವೆ ಎಂದು ಶಾಸ್ತ್ರ ತಿಳಿಸುತ್ತದೆ.

ಇಂದಿನ ಸ್ಥಿತಿ...

ಶ್ರಾದ್ಧಮಾಡುವವರು ಮಾತ್ರ ಶ್ರಾದ್ಧದ ದಿನ,  ಹೆಂಡತಿ ನೆನೆಪಿಟ್ಟು ಜನಿವಾರವನ್ನು ತಂದು ಕೊಟ್ಟರೆ, ಪುರೋಹಿತ ಮೊದಲೇ ತಂದಿಟ್ಟಿದ್ದರೆ  ಮಾತ್ರ  ಧರಿಸುವ ಘೋರ ಪ್ರಸಂಗ ಇಂದು ಎದುರಾಗಿದೆ. 

ನಿತ್ಯ ಧರಿಸುವದರಿಂದ ಸಿಗುವ ಫಲ ಅಪಾರವಾಗಿದೆ. ಅಷ್ಟು ಮಾತ್ರ ಹೇಳಬಲ್ಲೆ. ಬ್ರಾಹ್ಮಣ ಎಂದು ಎದೆ ತಟ್ಟಿ ಹೇಳಬಲ್ಲೆ. ಮಾನಸಿಕ ನೆಮ್ಮದಿ ಅಪಾರ. ಜನಿವಾರ ಇರುವದರಿಂದಲೇ ಒಂದು ವಿಶಿಷ್ಟ ಗೌರವ. ಜನಿವಾರ ಇರುವದರಿಂದ ಹಾಗೂ ಜನಿವಾರದಲ್ಲಿ ವಿಶಿಷ್ಟ ಸಿದ್ಧಿ ಇರುವದರಿಂದಲೇ ಅಧರ್ಮಕಾರ್ಯಗಳಲ್ಲಿ ಭಯ, ಧರ್ಮಕಾರ್ಯಗಳಲ್ಲಿ ಪ್ರೋತ್ಸಾಹ ಇವೆಲ್ಲ ದೊರೆಯುವದು ಜನಿವಾರ ಧಾರಣೆಯಿಂದಲೇ......

 ಪರಮ ಪವಿತ್ರವಾದ, ದೇವರ ಹಾಗೂ ದೇವತೆಗಳ  ಅಪಾರ ಸನ್ನಿಧಿಯಿಂದ ಕೂಡಿ ಈ ಜನಿವಾರ ಧಾರಣೆಯಿಂದ ಆಯುಷ್ಯ ಆರೋಗ್ಯ ಮೊದಲಾದವುಗಳ ಲಾಭವಿದೆ. ಎಂದು ತಿಳಿದಾಗ ನಮ್ಮ ಆಯುಷ್ಯದ ಹ್ರಾಸಕ್ಕೆ, ಆರೋಗ್ಯದ ಹಾನಿಗೆ, ಧರ್ಮಮಾಡದಿರುವದಕ್ಕೆ ಕಾರಣ ಏನಿರಬಹುದು ಎಂದು ವಿಚಾರ ಮಾಡುವ ಅವಶ್ಯಕತೆಯೇ ಇರದು. ತಾನೆ ತಿಳಿದು ಬರುತ್ತದೆ.

ಇಂದು ಧರಿಸೋಣ.‌ ನಿತ್ಯ ಉಪದಿಷ್ಟ ವೇದಗಳ ಅಧ್ಯಯನ, ಉಪದಿಷ್ಟ ಗಾಯತ್ರೀ ಮೊದಲಾದ ಜಪ ಮಾಡಿ ದೊರೆಯಲೇ ಬೇಕಾದ, ಮೇಲೆ ಹೇಳಿದ ಏನೆಲ್ಲ ಫಲವಿದೆ ಅದೆಲ್ಲವನ್ನೂ ಪಡೆದು ಕೊಳ್ಳೋಣ.

*✍🏽✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*