*ಬ್ರಹ್ಮಾಂಡದೊಳು ಆರಿಸಿ ನೋಡಲು ನಮ್ಮ ಮನೆಯ ಅನ್ನವೇ ವಾಸಿ ......*

*ಬ್ರಹ್ಮಾಂಡದೊಳು ಆರಿಸಿ ನೋಡಲು ನಮ್ಮ ಮನೆಯ ಅನ್ನವೇ ವಾಸಿ ......*

ಅನ್ನದಾನ ನಮ್ಮ ಸತ್ಸಂಪ್ರದಾಯದಲ್ಲಿ ಅನೇಕ ದಾನಗಳಲ್ಲಿ ಅತ್ಯುತ್ತಮ ಎಂದು ಸಾರಿದ ದಾನ. ಅದರ ಜೊತೆಗೆ ಪರಾನ್ನವೂ ಒಳ್ಳೆಯದಲ್ಲ, ಸರ್ವಥಾ  ಹಿತಕಾರಿಯೂ ಅಲ್ಲ ಎಂದು ಅಲ್ಲಲ್ಲಿ ತುಂಬ ಸಾರಿದೆ.

"ಅವರವರ ದೋಷಗಳನ್ನು ಹೊಂದಿಕೊಂಡ, ಅವರವರ ಪಾಪಗಳು, ಅವರು ಕೊಡುವ ಅನ್ನದೊಟ್ಟಿಗೆ   ಉಂಡವನನ್ನು ಸೇರಿಕೊಳ್ಳುತ್ತದೆ. ಹಾಗಾಗಿ ಪರಾನ್ನವನ್ನು ಉಂಡವನು ಆ ಪಾಪಗಳನ್ನು ಕಳೆದುಕೊಳ್ಳುವದಕ್ಕಾಗಿ ನಿತ್ಯ ಗಾಯತ್ರೀ ಮೊದಲಾದ ಜಪಮಾಡುವ ಸತ್ಸಂಪ್ರದಯವೂ ಒಂದಿತ್ತು.  ಇಂದು ...... ???

ತನ್ನತನವನ್ನೇ ಬದಲಾಯಿಸುವಂತಹ ಶಕ್ತಿ ಪರಾನ್ನಕ್ಕೆ ಇದೆ.  ಪರಾನ್ನ ಬಹಳ ವಿಚಿತ್ರ ಶಕ್ತಿ ಹೊಂದಿರುವಂತಹದ್ದು.  ಎಂಥವರನ್ನೂ ಬಗ್ಗಿಸುತ್ತದೆ. ಎಂಥ ಮಹಾ ನಿಷ್ಠುರ ವಾದಿಗಳನ್ನೂ ಬದಲಾಯಿಸಿ ಬಿಡುತ್ತದೆ. ಮಹಾ ಧರ್ಮ ನಿಷ್ಠುರರಿಗೂ ಅತೀ ದೊಡ್ಡ ಅಧರ್ಮಕ್ಕೇ ಸಪೋರ್ಟ ಮಾಡುವಂತೆ ಮಾಡಿಬಿಡುತ್ತದೆ. ನಿದರ್ಶನ ಭೀಷ್ಮ ದ್ರೋಣರೇ...

ಭೀಷ್ಮಾಚಾರ್ಯರು ಯುದ್ಧದ ನಂತರ ಶರಪಂಜರದಲ್ಲಿ ಬಿದ್ದಾಗ ಧರ್ಮರಾಯನಿಗೆ, ಕನಿಷ್ಠ ಆರುನೂರು ಅಧ್ಯಾಗಳಿಂದ ಯುಕ್ತವಾದ, ಸಹಸ್ರಾರು ಧರ್ಮಗಳಿಂದ ಕೂಡಿದ ಸುದೀರ್ಘವಾದ ಶಾಂತಿ ಪರ್ವ, ಅನುಶಾಸನ ಪರ್ವಗಳನ್ನು ಉಪದೇಶಿಸುತ್ತಾರೆ. ಈ ಸುದೀರ್ಘದ ಉಪದೇಶ ಕೇಳಿದ ದ್ರೌಪದಿ ನಸು ನಗುತ್ತಾಳೆ.

ದ್ರೌಪದಿಯ ನಗು ಅಲ್ಲಿ ನೆರೆದ ಪ್ರತಿಯೊಬ್ಬರಿಗೂ ಆಶ್ಚರ್ಯವನ್ನು ತರುತ್ತದೆ. ಉದ್ದೇಶ್ಯ ತಿಳಿಯುವದಾಗುವದಿಲ್ಲ.  ಆದರೆ ಆ ನಗುವಿನ ಮರ್ಮವನ್ನು ಅರಿತ ಭೀಷ್ಮರು ಮಾತ್ರ ಶಾಂತವಾಗಿ ಉತ್ತರಿಸುತ್ತಾರೆ. "ಮಗಳೆ !! ಅಂದು ಆ ದುರ್ಯೋಧನ ಅನ್ನದ ಪ್ರಭಾವದಿಂದ, ಸಭೆಯಲ್ಲಿ ಮೈ ಮರೆತು ಕೂತೆ. ಆದರೆ ಇಂದು ನಿನ್ನ ಗಂಡನ ಒಂದೊಂದು ಬಾಣದಿಂದ ಏನು ಇಷ್ಟೆಲ್ಲ ರಕ್ತ ಸೋರಿದೆ ಆಲ್ಲ, (ಪ್ರತಿ ರಕ್ತದ ಕಣವೂ ದುರ್ಯೋಧನದೇ.) ಅದೆಲ್ಲ ಸೋರಿದ ಕಾರಣಕ್ಕೆ ಇಷ್ಟು ಧರ್ಮವನ್ನು ಉಪದೇಶಿಸುತ್ತಿರುವೆ" ಎಂದು. 

ಆರನೂರು ವರ್ಷ ಜೀವಿಸಿ, ಜೀವನದ ಅರ್ಧದಷ್ಟು ಅಧ್ಯನದಲ್ಲೇ ಮುಳುಗಿದ, ನಿತ್ಯ ಬ್ರಹ್ಮಚಾರಿಯಾದ, ವೇದವ್ಯಾಸರ ತಮ್ಮನಾದ,  ಭೀಷ್ಮಾಚಾರ್ಯರ ಅವಸ್ಥೆ ಇದು. ನಿತ್ಯ ಪರಾನ್ನದಲ್ಲೇ ಮುಳುಗಿದ ನಮ್ಮವಸ್ಥೆ ಇನ್ನೇನಿದೆಯೋ ವಿಚಾರಿಸಬೇಕು.

ಹಾಗಾದರೆ ವರ್ಜ್ಯವಾದ ಪರಾನ್ನ ಯಾವುದು.... ?????

*ಭಗವನ್ನಿವೆದಿತವಾಗದಿರುವ ಅನ್ನವನ್ನು ತಿನ್ನಲೇ ಬಾರದು.*
ಅನ್ನವನ್ನು ನಿಂದಿಸುವನ ಅನ್ನ, ದುರಹಂಕಾರಿಯ ಅನ್ನ, ಕಟುಕ, ಬೇಡ, ನಟ ಇವರುಗಳ ಅನ್ನ. ಮದ್ಯ ಮಾರುವವನ ಅನ್ನ. ಹುಚ್ಚ, ವ್ರಾತ್ಯ, ಲೋಭಿ, ತೆರಿಗೆ ಕಟ್ಟದವನ ಅನ್ನ. ಪತಿತನ ಅನ್ನ. ಅಶುದ್ಧವಾದ ಅನ್ನ. ವೈಶ್ವದೇವ ಇಲ್ಲದ ಅನ್ನ. ಬೇರೆಯವರಿಗೆ ಮೀಸಲಿಟ್ಟ ಅನ್ನ. ಈ ಅನ್ನವನ್ನು ತಿಂದರೆ ತಿಂದವನನ್ನು ಸುಟ್ಟು ಹಾಕುತ್ತದೆ ಎಂದು ವ್ಯಾಸ ಸ್ಮೃತಿ ಹೇಳುತ್ತದೆ.

ಮದವೇರಿದವನ, ಕೋಪಿಷ್ಠನ ಅನ್ನ, ಗರ್ಭ- ಶಿಶು- ಗೋ- ಬ್ರಾಹ್ಮಣರ ಹತ್ಯೆ ಮಾಡಿದ ಅನ್ನ, ಪಾಪಿಗಳು ನೋಡಿದ ಅನ್ನವನ್ನೂ ಸರ್ವಥಾ ತಿನ್ನ ಕೂಡದು.

ಲೋಭಿಯ ಅನ್ನ, ಮಹಾಪಾತಕಿಯ ಅನ್ನ, ವ್ಯಭಿಚಾರಿಯ ಅನ್ನ, ಮೊಸಮಾಡಿ ಘಳಿಸುವವನ ಅನ್ನ,  ಗುರೂಚ್ಛಿಷ್ಟದ ಅನ್ನ, (ಪತಿಯ ಉಚ್ಛಿಷ್ಟ ಪತ್ನಿಗೆ ಬಿಟ್ಟು) ಪರರ ಉಚ್ಚಿಷ್ಟ ಅನ್ನ ಸರ್ವಥಾ ಸೇವಿಸಲೇ ಬಾರದು ಎಂದು ಸ್ಕಾಂದ ಪುರಾಣ ತಿಳಿಸುತ್ತದೆ.

ಕೋಪಿಷ್ಟ, ಕ್ರೂರಿ, ಕುಟಿಲ, ವೇಷಗಾರ, *ಅನ್ನ  ಮಾರುವವನ ಅನ್ನ* ಸರ್ವಥಾ ಸ್ತೀ ಅಧೀನನೇ ಇರುವವನ ಅನ್ನ, ತಿನ್ನಲೇ ಬಾರದು.

ಅರಸನ ಅನ್ನದಿಂದ ವೇದಾಧ್ಯಯನದಿಂದ ಉಂಟಾದ ಬ್ರಹ್ಮ ತೇಜಸ್ಸಿನ ನಾಶ. ಸ್ವರ್ಣಕಾರನ‌ ಅನ್ನದಿಂದ ಆಯುರ್ವಿನಾಶ. ಬಡ್ಡಿಯಿಂದ ಜೀವಿಸುವವನ ಅನ್ನ ಹೊಲಸಿಗೆ ಸಮ. ಹೀಗೆ ನಾನಾ ತರಹದ ಅನ್ನವನ್ನು ನಿಷೇಧಿಸುತ್ತದೆ ಶಾಸ್ತ್ರ. ಇನ್ನೂ  ದೊಡ್ಡ ಲಿಸ್ಟ ಇದೆ. ಅನೇಕ ಬಿಟ್ಟಿದ್ದೇನೆ. ಕೆಲವು ಹೇಳಿದ್ದೇನೆ. ಅನೇಕ ಹೇಳುವಂಥದ್ದೂ ಇವೆ ಮತ್ತೆ ತಿಳಿದುಕೊಳ್ಳೋಣ.....

ಆದ್ದರಿಂದ *ಬ್ರಹ್ಮಾಂಡದಲಿ ಆರಿಸಿ ನೋಡಲು ನಮ್ಮ ಮನೆಯನ್ನವೇ ವಾಸಿ.*

 *ದೇವರಿಗೆ ನೈವೇದ್ಯದ ಅನ್ನವೇ ಸರ್ವೋತ್ತಮ, ಪರಿಶುದ್ಧ ಅನ್ನ.* ಅದಾಗದಿದ್ದರೂ ನಮ್ಮ ಮನೆಯ ಅನ್ಮವನ್ನೇ ಉಣ್ಣುವ ಸತ್ಸಂಕಲ್ಪವಾದರೂ ಮಾಡಲೇ ಬೇಕಿದೆ ಇಂದು.

*ಸಂ. ✍🏽✍🏽 ನ್ಯಾಸ....*
ಗೋಪಾಲದಾಸ.
 ವಿಜಯಾಶ್ರಮ, ಸಿರವಾರ.

Comments

Shamala R said…
ಸತ್ಯವಾದ ಮಾತು.. ನಮ್ಮ ಮನೆಯ ಅನ್ನವನ್ನು ಉಣ್ಣುವಾಗಲೂ ಇಂತಿಷ್ಟೇ ಎಂದು ನಿಗಧಿ ಮಾಡಿ ಉಂಡರೆ ಅದು ನಮಗೇ ಹಿತಕಾರಿ...ಅಲ್ಲವೇ ಆಚಾರ್ಯರೇ??

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*