*ಈಗಿನ ಕ್ಷಣ, ದಿನ, ಜೀವನ ಬಿಟ್ಟಾಗ ಮಾತ್ರ ಹುಡಕಲು ಸಾಧ್ಯ.....*

*ಈಗಿನ ಕ್ಷಣ, ದಿನ, ಜೀವನ ಬಿಟ್ಟಾಗ ಮಾತ್ರ ಹುಡಕಲು ಸಾಧ್ಯ.....*

ಶ್ರೀಹರಿಯನ್ನು ಕಾಣಲು ಅನ್ವೇಷಣಮಾಡಬೇಕು, ಶ್ರೀಹರಿಯನ್ನು ಹುಡಕಬೇಕು ಎಂದು ಶಾಸ್ತ್ರ ಹೇಳುತ್ತದೆ. ಹುಡುಕಬೇಕಾದರೆ ಈಗಿನ ಕ್ಷಣ, ದಿನ, ಜೀವನ ಬಿಡಬೇಕಾಗುತ್ತದೆ. ಆಗ ಮಾತ್ರ ಹುಡುಕಲು ಸಾಧ್ಯ.

*ಜೀವನಬಿಟ್ಟಾಗಲೇ ದೇವರನ್ನು ಹುಡಕಲು ಸಾಧ್ಯವೆ... ?? ಹಾಗಾದರೆ
ದೇವರನ್ನು ಹುಡುಕುವದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆ... ??*

ಜೀವನದಿಂದ ಬೇಸತ್ತ, ದೀನ, ದುಃಖಿಗಳಾದ ನಾವು ಆತ್ಮಹತ್ಯೆಗೆ ಸಣ್ಣ ನೆಪ ಸಿಕ್ಕರೂ ಸಾಕು ಸಿದ್ಧರಿದ್ದೇವೆ. "ಕ್ಷಣ, ದಿನ, ಜೀವನ ಬಿಡಬೇಕು ಎಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಲ್ಲ. "ಕ್ಷಣದ, ದಿನದ, ಜೀವನದ ವೈಷಯಿಕ ಸುಖಗಳ ಅನುಭೋಗವನ್ನು ಬಿಡಬೇಕು ಎಂದರ್ಥ."

ಉದಾಹರಣೆಗೆ ಈ ಕ್ಷಣಕ್ಕೆ ನಿದ್ರೆಯ ಸುಖವನ್ನು ಅನುಭವಿಸುವೆ, ಜೊತೆಗೆ ದೇವರನ್ನೂ ಹುಡುಕುವೆ ಇದು ಅಸಾಧ್ಯದ ಮಾತು. ನಿದ್ರೆಯ ಸುಖವನ್ನು ತ್ಯಜಿಸಿದಾಗ ಮಾತ್ರ ದೇವರನ್ನು ಹುಡಕಲು ಸಾಧ್ಯ. "ಒಂದೋ ದೇವರನ್ನು ಹುಡುಕು, ಇಲ್ಲವೋ ವೈಷಯಿಕ ಸುಖವನ್ನು ಅನುಭೋಗಿಸು" ಎರಡೂ ಸಾಧಿಸುವವರು ದೇವತಾಪುರುಷರು ಮಾತ್ರ.   ಸಾಮಾನ್ಯ ಮಾನವನಿಗೆ ಅಸಾಧ್ಯವಾದದ್ದೇ.

ಊಟ ಮಾಡ್ತಾ ಇದ್ದೇವೆ. ಊಟದ ಕಡೆ ಗಮನ ಕೊಡದೆ, ಟೀವಿ, ಮೋಬೈಲ್, ಹರಟೆ, ಅಡಗಿಯ ಬಗ್ಗೆ ಕಮೆಂಟ್ಸ, ಕಂಪನಿಯ ವಿಚಾರಗಳು, ಅದು ಇದು ನೂರು ಜಂಜಡದಲ್ಲಿ ಮುಳುಗಿದಾಗ ಊಟವೊಂದೇ ಆಗಿರುತ್ತದೆ, ಊಟದ ತೃಪ್ತಿ ಸರ್ವಥಾ ಸಿಗದು.  ಬೇರೆಡೆ ಗಮನ ಕೊಟ್ಟಾಗ ಅತೀ ಸಣ್ಣ ಭೋಜನದ ತೃಪ್ತಿಯೇ,  ಸಿಗದಿರುವಾಗ, ದೇವರ ಜ್ಙಾನಮಾಡಿಕೊಂಡರ ತೃಪ್ತಿಯೋ, ದೇವರ ಹುಡುಕಾಟದ ತೃಪ್ತಿಯೋ,  ದರ್ಶನದ ತೃಪ್ತಿಯೋ, ಮೋಕ್ಷಾನಂದದ ತೃಪ್ತಿಯೋ ಹೇಗೆ ದೊರಕೀತು..... ??????

*ಶ್ರೇಷ್ಠವಾದ ಒಂದನ್ನು ಪಡೆಯುವದಕ್ಕಾಗಿ, ಕನಿಷ್ಠವಾದವುಗಳ ನೂರನ್ನು ತ್ಯಜಿಸುವದು ಅನಿವಾರ್ಯ* ಈ ಅರ್ಥದಲ್ಲಿಯೇ ಕ್ಷಣ, ದಿನ, ಜೀವನ ಬಿಡಬೇಕು ಎಂದು ಹೇಳಿದಂತೆ ತೋರುತ್ತದೆ. ಅಂತೆಯೆ ಋಷಿಮುನಿಗಳು ಕನಿಷ್ಠವಾದ ನೂರಾರು ಜನುಮಗಳ ಅಲ್ಲ ಸಾವಿರಾರು ಜನುಮಗಳ ಎಲ್ಲ ಸುಖವನ್ನು ಬಿಟ್ಟಕಾರಣಕ್ಕೇ ದೇವರನ್ನು ಹುಡುಕಿದರು, ಕಂಡರು, ಪಡೆದರು, ಅನಂತ ಆನಂದಕ್ಕೆ ಭಾಗಿಯೂ ಆದರು.

*ತ್ಯಜಿಸದೇ ಪಡೆಯಲು ಅಸಾಧ್ಯವೇ...??*

ಜಗತ್ತಿನಲ್ಲಿ ಅತ್ಯಂತ ಉಚಿತವಾದದ್ದು ಯಾವುದಾದರೂ ಇದೆ ಎಂದರೆ (ಇಂದು ಭೂಮಿ, ನೀರು, ಅಗ್ನಿ ಇವೆಲ್ಲವೂ ಹಣಕೊಟ್ಟೇ ಪಡೆಯುವ ಅವಸ್ಥೆ ಬಂದಿದೆ) ಅದು ಘಾಳಿ ಮಾತ್ರ. ಆ ಉಚಿತವಾದ ಘಾಳಿಯೂ ಉಚಿತವಾಗಿ ಏನು ದೊರೆಯದು. ಅದಕ್ಕೂ ಒಂದರ ತ್ಯಾಗ ಅವಶ್ಯಬೇಕು. ಅದೇನೆಂದರೆ "ಹೊಟ್ಟೆಯಲ್ಲಿಯ ಘಾಳಿಯಯನ್ನು ಹೊರ ಹಾಕಿದಾಗ ಮಾತ್ರ, ಹೊರಗಿನ ಘಾಳಿಯನ್ನು ತೆಗೆದುಕೊಳ್ಳಲು ಬರುತ್ತದೆ, ಹೊಟ್ಟೆಯಲ್ಲಿಯ ಘಾಳಿಯನ್ನು ಘಟ್ಟಿಯಾಗಿ ಹೊಟ್ಟೆಯಲ್ಲಿಯೇ ಇಟ್ಟುಕೊಂಡು, ಹೊರಗಿನ ಘಾಳಿಯನ್ನೂ ಸ್ವೀಕರಿಸುವೆ ಎಂಬುವದು ಅಸಾಧ್ಯದ ಮಾತೆ ಅಲ್ಲವೆ." ಇದು ಉದಾಹರಣೆ ಮಾತ್ರ. ಹೀಗೆ ಹಿಂದಿನ ಹೆಜ್ಜೆ ಇಟ್ಟ ಭೂಮಿಯನ್ನು ಬಿಟ್ಟಾಗ ಮಾತ್ರ ಮುಂದಿನ ಬೂಮಿ ಪಡೆಯಲು ಸಾಧ್ಯ. ಹೀಗೆ ಪ್ರತಿಯೊಂದೂ....

ಉಚಿತ ಘಾಳಿಯನ್ನು ಪಡೆಯಲೇ ತ್ಯಾಗ ಬೇಕಾಗಿರುವಾಗ, ಅನಂತ ಆನಂದ ಕೊಡುವ, ಬ್ರಹ್ಮಾದಿಗಳಿಗೆ ವಂದ್ಯನಾದ, ಹದಿನಾಲ್ಕು ಲೋಕಕ್ಕೆ ಒಡೆಯನಾದ, ಲಕ್ಷ್ಮೀತಿಯಾದ, ದೇವರಿಗೋಸ್ಕರ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಬ್ರಹ್ಮ, ವಾಯು, ಲಕ್ಷ್ಮೀದೇವಿಯರಿಂದ ನಿರಂತರ ಪೂಜ್ಯನಾದ ಶ್ರೀಹರಿ ತ್ಯಾಗವಿಲ್ಕದೇ ಸಿಗುತ್ತಾನೆ ಎನ್ನವದು ಊಹೆಗೂ ನಿಲಕುದ ವಿಚಾರ ಎಂದೆನಿಸುತ್ತದೆ.

ದಿನಕ್ಕೆ ಒಂದೊಂದು ಕ್ಷಣ, ಒಂದೊಂದು ನಿಮಿಷ, ಒಂದೋಂದು ಗಂಟೆಯಾದರೂ ದೇವರನ್ನು ಹುಡುಕಲು ತ್ಯಾಗ ಮಾಡುವ ಕೌಶಲ ಇಂದಿನಿಂದಲೇ ನನಗೆ ಬೆಳೆಯಲಿ ಎಂದು "ಕಣ ಕಣದಲ್ಕಿ ವ್ಯಾಪಿಸಿರುವ, ಅಂತೆಯೇ ನನ್ನಲ್ಲಿಯೂ ವ್ಯಾಪಿಸಿರುವ, ಕಣ ಕಣ ಪ್ರೇರಕನಾದ ಅಂತೆಯೇ ನನ್ನ ಪ್ರೇರಕನೂ ಆದ ಶ್ರೀಹರಿಯಲ್ಲಿ ಅನನ್ಯಗತಿಕವಾಗಿ ಪ್ರಾರ್ಥಿಸುವೆ.

*✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*