*ಓ ಕೃಪಣವತ್ಸಲ......!! ನಾ ನಿನ್ನ ಮೊರೆಹೊಕ್ಕೆ

*ಓ ಕೃಪಣವತ್ಸಲ......!! ನಾ ನಿನ್ನ ಮೊರೆಹೊಕ್ಕೆ*

"ಕೃಪಣವತ್ಸಲ" ಇದೊಂದು ಶ್ರೀಹರಿಯ ಬಹುದೊಡ್ಡ ಗುಣ.  ಈ ಮಹಾ ಗುಣವನ್ನು ಕೊಂಡಾಡುವ ಈ ಶಬ್ದ ಇತಿಹಾಸ, ಪುರಾಣ, ಪಂಚರಾತ್ರ, ದಾಸರಪದಗಳು ಎಲ್ಲೆಡೇ ನಮಗೆ ಕೇಳಿ ಬರುತ್ತದೆ.

ಮನುಷ್ಯನಿಗೆ ಕಷ್ಟ ಕಾರ್ಪಣ್ಯಗಳು ಸಹಜ.   ಏನೂ ಇಲ್ಲದ, ಕಷ್ಟಗಳುಳ್ಳ ಅಂತೆಯೇ ದುಃಖಿಯಾದ ಮನುಷ್ಯನಿಗೆ "ಕೃಪಣ" ಎಂದು ಕರಿಯುವದು ಇದೆ.

"ಕೃಪಣ"ನಿಗೆ ಕೊಡಲು ಏನಿರುವದಿಲ್ಲ ಎನ್ನುವದಕ್ಕಿಂತಲೂ ಇದ್ದದ್ದು ಯಾವದನ್ನೂ ಕೊಡಲಾಗುವದಿಲ್ಲ. ಆತ ಎಲ್ಲ ವಸ್ತುವನ್ನೂ ಭದ್ರವಾಗಿ ಹಿಡಿದು ಇಟ್ಟುಕೊಳ್ಳುತ್ತಾನೆ, ಎಲ್ಲವನ್ನೂ ಕಸಿದುಕೊಳ್ಳುತ್ತಾನೆ.

" ಕೃಪಣ" ಆಳವಾದ ಉಸಿರನ್ನೂ ತೆಗೆದುಕೊಳ್ಳುವದಿಲ್ಲ. ಏಕೆಂದರೆ, ಆಳವಾದ, ದೀರ್ಘವಾದ ಉಸಿರು ತೆಗೆದುಕೊಂಡರೆ, ಅಷ್ಟೇ ದೀರ್ಘವಾಗಿ ಉಸಿರನ್ನೂ ಹೊರಬಿಡಬೇಕಾಗುತ್ತದೆ.

ಕೃಪಣ ಪ್ರೇಮವನ್ನೂ ಮಾಡಲಾರ... ಏಕೆಂದರೆ ಪ್ರೇಮದಲ್ಲಿ ದಾನ ಸಮಾವಿಷ್ಟಗೊಂಡಿರುತ್ತದೆ. ಪ್ರೇಮಕೊಡುವಂತಹದ್ದು. "ಯಾರಿಂದ ಕೊಡಲಾಗದೋ, ಅವರಿಂದ ಪ್ರೇಮಿಸಲು ಹೇಗೆ ಸಾಧ್ಯ...?."  "ಕೃಪಣ"ರಾಗಿದ್ದಲ್ಲಿ ಪ್ರೇಮ ಜನಿಸಲು ಸಾಧ್ಯವಿಲ್ಲ. ಪ್ರೆಮಿಗಳು ಎಂದಿಗೂ ಆಗಲಾರರು. *ಯಾರು ಪ್ರೇಮಿಗಳೋ ಅವರು ಕೃಪಣರಾಗಿರಲು ಸಾಧ್ಯವಿಲ್ಲ.* ಪ್ರೇಮದಲ್ಲಿ ನಮ ಹೃದಯವನ್ನೇ ಕೊಡುತ್ತಿದ್ದೇವೆ. ಅದೀಗ ಎಲ್ಲವನ್ನೂ ಕೊಡಬಲ್ಲದು.  ಒಂದಂತೂ ನಿಜ *ಕೃಪಣತೆಯ ಸಂಬಂಧ ಆನಂದದ ಜೊತೆಗೆ ಇಲ್ಲ. ದುಃಖದೊಂದಿಗೇ ಇದೆ.*

ಎಂದು ನಮ್ಮಲ್ಲಿ ನಿಜವಾಗಿ ಆನಂದ ತುಳುಕುವದೋ ಅಂದಿನಿಂದ ನಾವು ದಾನಿಗಳಾಗಬಹುದು. ಅಂದೇ ನಮ್ಮ ಕೃಪಣತೆ ಭಿಕಾರಿತನಕ್ಕೆ ಕೊನೆಗಾಣಿಸಬಹುದು. ಅಂದು ಮೊಟ್ಟಮೊದಲು ಬಾರಿಗೆ ಹಂಚಿಕೊಳ್ಳಲು ಸಮರ್ಥರಾಗುತ್ತೇವೆ. ಅಂತೆಯೇ ಆನಂದ ಪೂರ್ಣ ಶ್ರೀಹರಿ ತುಂಬ ವಾತ್ಸಲ್ಯದಿಂದ ನಮಗೆ  ತನ್ನದೇ ಆದ ಆನಂದ ಮೊದಲಾದ ಎಲ್ಲವನ್ನೂ ಹಂಚಿಕೊಳ್ಳುತ್ತಾನೆ.

ಹಣವನ್ನು ಹಂಚಿದರೆ ಕಳೆದುಹೋಗುತ್ತದೆ, ಕಡಿಮೆ ಆಗುತ್ತದೆ. ಹಣದ ಆಧಾರ ದುಃಖ. ಆನಂದವಂತೂ ಅಲ್ಲವೇ ಅಲ್ಲ. ಹಣಹೋದಮೆಲೆ ದುಃಖ ಸಹಜ.

" ಭಿಕ್ಷಾಂ ದೆಹಿ" ಎಂದು ಒಬ್ಬ ಸಾಧು ಮನೆ ಬಾಗಿಲಿಗೆ ಬಂದು ಬೇಡಿದ. ಗೃಹಿಣಿ ಪಾತ್ರೆ ತುಂಬ ಭಿಕ್ಷೆ ನೀಡಿದಳು. ಆದರೆ ಅವನ ಮುಖದ ವರ್ಚಸದಸು ತೇಜಸ್ಸು ನೋಡಿ ಕೇಳಿದಳು,  "ನಿನಗೇಕೆ ಭಿಕ್ಷೆ ಬೇಡುವ ಪ್ರಸಂಗ ??" ಭಕ್ಷುಕ ಉತ್ತರಿಸಿದ, ನಿನ್ನ ಹಾಗೆಯೆ ಕೊಡುಗೈ ಮುಂದ ನಾನು. ನಿನಗೂ ಆ ಅವಸ್ಥೇ ಬಂದರೆ ಬಂದೀತು. ಎಂದುಸುರಿಸಿದ....

ಹಣ ಮೊದಲಾದ ವಸ್ತುಗಳನ್ನು ಹಂಚಿಕೊಳ್ಳದಿದ್ದರೂ, ಆದರೆ ನಗುವನ್ಬಾದರೂ ಹಂಚಿಕೊಳ್ಳಬಹುದಲ್ಲ... ?? ಪ್ರೇಮವನ್ನು, ಸ್ನೇಹವನ್ನು, ಉತ್ತಮವಾದ ಹಿತವಾದ ಮಾತುಗಳನ್ನೋ ಹಂಚಿಕೊಳ್ಳ ಬಹುದಲ್ಲ... ?? ಕೃಪಣ(ಭಿಕ್ಷುಕ)ತೆಯನ್ನು ಮೈಗೂಡಿಸಿಕೊಂಡವನಿಗೆ ಅದಾಗದು.

*ಕೃಪಣವತ್ಸಲ* ಸ್ವಾಮಿ ಹಾಗಲ್ಲ. ತನ್ನ ವಸ್ತುವನ್ನು ಎಂದಿಗೂ ಭೂಮಿಗೆ ತರುವದಿಲ್ಲ. ಭೂಮಿಯಲ್ಲಿಯ ಭಕ್ತರಿಗೆ ಕೊಡುವದರಲ್ಲಿ ಕಿಂಚಿತ್ತೂ ಕಡಿಮೆಯಾಗಿದೆ ಎಂದಾಗಿರುವದಿಲ್ಲ. ಏಕೆಂದರೆ... ಆ ದೇವ ಮನಃಪೂರ್ವಕವಾಗಿ ಹಾಗೂ ನಮ್ಮಲ್ಲಿ ಉಳಿಯುವಂತಹದ್ದೇ, ಜೊತೆಗೆ ನಾವೂ ಹಂಚಿಕೊಳ್ಳಬಹುದಾದ್ದನ್ನೇ ಕೊಡುತ್ತಾನೆ.  ಅದು ಮತ್ಯಾವುದಲ್ಲ  ಆನಂದವನ್ನು. ಜ್ಙಾನವನ್ನು, ಭಕ್ತಿಯನ್ನು. ಸಮೃದ್ಧಿ ಹಾಗೂ ಸಂತೃಪ್ತಿಯನ್ನು. ಇವುಗಳನ್ನು ಬಿಟ್ಟು ಬೆರೆಯದೇ ಆದ ವಸ್ತುಗಳನ್ನು ಪಡೆದಿದ್ದೇವೆ ಎಂದರೆ ಕೃಪಣರಾಗಿಯೆ ಪಡೆದಿರ್ತೇವೆ. ಆ ವಸ್ತುಗಳನ್ನು  ಭೋಗಿಸಲೂ ಆಗದೆ, ಇಟ್ಟುಕೊಳ್ಳಲೂ ಆಗದೆ, ಹಂಚಿಕೊಳ್ಳಲೂ ಆಗದೆ ಸಾಯುವದೊಂದೇ ಆಗುತ್ತದೆ.

ಹಣ, ಮೊದಲಾದವುಗಳಿಗೆ ಒಂದು ಸೀಮೆ ಇದೆ. ಕೊಡುತ್ತಿದ್ದರೆ ಕಡಿಮೆ ಆಗುತ್ತದೆ. ಆದರೆ ಜ್ಙಾನ ಆನಂದ ಭಕ್ತಿ ಪ್ರೇಮ ಇವುಗಳಿಗೆ ಸೀಮೆಯಿಲ್ಲ. ಕೊಟ್ಟಷ್ಟು ಬೆಳಿಯುತ್ತದೆ. ಕೊಟ್ಟಷ್ಟು ತೃಪ್ತಿ ಇದೆ. ಕೊಡುತ್ತಿದ್ದರೆ ಚಿಮ್ಮುತ್ತದೆ. ಎಷ್ಟೆಷ್ಟು ತೆಗೆದು ಹೊರಹಂಚುತ್ತೇವೆಯೋ ಅಷ್ಟಷ್ಟು ಹೊಸ ಹೊಸ ಬುಗ್ಗೆಗಳು ಆವಿರ್ಭವಿಸುತ್ತವೆ.

ಹೇ ಕೃಪಣವತ್ಸಲ !! ಇಂದು ನಾನು ನಿನಗೆ ಶರಣು ಬಂದಿದ್ದೇನೆ, ವಾತ್ಸಲ್ಯವನ್ನು ತೋರು. ನಾನು ಕೃಪಣ ನಿಜ. ಹಂಚಿಕೊಳ್ಳ ಬಹುದಾದ ಜ್ಙಾನ ಆನಂದ ಭಕ್ತಿ ಪ್ರೇಮ ನಗು ಸಮೃದ್ಧಿ ಸಂತೃಪ್ತಿ ಇವುಗಳನ್ನೇ ದಯಪಾಲಿಸು. ನನ್ನನ್ನು ಕೃಪಣನನ್ನಾಗಿ ಸರ್ವಥಾ ಮಾಡಬೇಡ. ನಿನಗೆ ಎನ್ನ‌ ವಂದನೆಗಳು. ಅನಂತ ಪ್ರಣಾಮಗಳು.

*✍🏽✍🏽✍ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*