ದೇವರು ಮತ್ತು ನಾನು

*ದೇವರು ಮತ್ತು ನಾನು*

ಶ್ರೀಹರಿ ಬಿಂಬ. ನಾನು ಪ್ರತಿಬಿಂಬ. ಆ ಅಂತರ್ಯಾಮಿ ಬಿಂಬನ ಹೆಸರು ಹರಿ ಎಂದು. ಹರಿ ನಾಮಕ ಹರಿಯ "ಸದೃಶ ಹಾಗೂ ಅಧೀನ" ಜೀವ. ಅಂತೆಯೇ ಜೀವನಿಗೆ *ಆಭಾಸ* ಎಂದು ಕರೆಯುವದು ಇದೆ. ಪರಮಾತ್ಮಾಭಾಸ ಜೀವ.

*ಬಿಂಬನ ಅಧೀನ ಜೀವ ಸರಿ. ಜೀವ, ಬಿಂಬನಾದ ಪರಮಾತ್ಮನಿಗೆ ಸದೃಶನಾಗಿರುವನಾ .. ??*

ಸರ್ವಾತ್ಮನಾ ಸಾದೃಶ್ಯ ರಮಾ ಬ್ರಹ್ಮ ಮಿದಲು ಮಾಡಿ ಯಾವ ಜೀವರಿಗೂ ಇಲ್ಲ. ಪ್ರತಿಬಿಂಬರಾದ ರಮಾ ಬ್ರಹ್ಮರಿಂದ ಆರಂಭಿಸಿ ಕಲಿಪರ್ಯಂತ ಸಕಲಜೀವರಾಶಿಗಳಲ್ಲಿ ಅನುಸ್ಯೂತವಾದ ಒಂದು ಧರ್ಮವೆಂದರೆ ಅದು "ಚಿತ್." ಹಾಗಾಗಿ ಚಿತ್ವೇನ ಬಿಂಬ ಸಾದೃಶ್ಯ ಜೀವನಿಗೆ ಇದೆ ಎಂದು ತಿಳುಹಿಸುತ್ತದೆ.

*ಬಿಂಬ ಪ್ರತಿಬಿಂಬರುಗಳಿಗೆ ಅಂತರವಿದೆಯಾ... ??*

"ಬಿಂಬೋಸಿ ಪ್ರತಿಬಿಂಬೋಸ್ಮಿ
ತವ ಯದ್ಯಪಿ ಚಾಂತರಮ್ |
ಸ್ವಾಮಿನ್ ನಿರ್ದೋಷ ಮದ್ದೋಷಾನ್
ವಿರೇಚಯ ನಮೋಸ್ತು ತೇ ||

"ಹೇ ಸ್ವಾಮಿನ್ !! ಬಿಂಬೋಸಿ ನೀನು ಬಿಂಬನಾಗಿರುವಿ. ನಾನು ಪ್ರತಿಬಿಂಬ. ನೀನು ನಿರ್ದೋಷ. ನನ್ನ ಲೆಕ್ಖವಿಲ್ಲದ ದೋಷಗಳನ್ಮು ನಾಶಮಾಡು. ನಿನಗೆ ಅನಂತ ವಂದನೆಗಳು." ಎಂದು ಶಾಸ್ತ್ರ ಸಾರುತ್ತದೆ. ಹಾಗಾಗಿ ಬಿಂಬ ಪ್ರತಿಬಿಂರುಗಳಿಗೆ ಅಪಾರ ಅಂತರವೇ ಇದೆ.

*ಶ್ರೀಹರಿ ಎಂದಿನಿಂದ ಬಿಂಬನಾಗಿ ಇದ್ದಾನೆ.. ??*

"ಮೊದಲಿಲ್ಲದ ಕಾಲದಿಂದ ಆರಂಭಿಸಿ, ಕೊನೆಯಿಲ್ಲದ ಕಾಲದವರೆಗೆ" ಎನ್ನ ಬಿಂಬನಾಗಿ, ನಿಯಾಮಕನಾಗಿ, ಅಸ್ತಿತ್ವವೇ ಮೊದಲು ಮಾಡಿ ಸರ್ವಸ್ವವನ್ನೂ ಕೊಟ್ಟು, ಕೊಡುತ್ತಾ ಪ್ರೇರಕನಾಗಿ ಇದ್ದಾನೆ. ಇರುತ್ತಾನೆಯೂ ಸಹ.

*ಜೀವರಾಶಿಗಳಗೆ ಪ್ರೇರಕನಾಗಿ ಅಂತರ್ಯಾಮಿಯಾಗಿ ಇರುವದರಿಂದ ಏನು ಲಾಭವಿದೆ... ??*

ಶ್ರೀಹರಿ ನನಗೆ ಪ್ರೇರಕ ಅಂತರ್ಯಾಮಿಯಾಗಿ ಇರುವದರಿಂದ ಶ್ರೀಹರಿಗೆ ಕಿಂಚಿತ್ತೂ ಲಾಭವಿಲ್ಲ. ನನ್ನಂತಹ ಅನಂತ ಜೀವರಿಗೆ, ಅನಾದಿಯಿಂದ ಅನಂತಕಾಲದವರಿಗೆ ಪ್ರೇರಕನಾಗಿ ಅಂತರ್ಯಾಮಿಯಾಗಿ ಇರುವದರಿಂದಲೂ ಕಿಚಿತ್ತೂ ಲಾಭವಿಲ್ಲ. *ದೇವಸ್ಯೇಷ ಸ್ವಭಾವೋಯಂ ಆಪ್ತಕಾಮಸ್ಯ ಕಾ ಸ್ಪೃಹಾ* ಎಂದು ಹೇಳಿದಂತೆ ನಮಗೆ ಪ್ರೇರಿಸುವದು, ನಿಯಮಿಸುವದು, ಸೃಷ್ಟಿಗೆ ತರುವದು, ಸಾಧನೆ ಮಾಡಿಸುವದು, ಮುಕ್ತಿಕೊಡಿಸುವದು ಇದೆಲ್ಲವೂ ಭಗವಂತನ ಸ್ವಭಾವ ಎಂದು ಹೇಳಬಹುದು ಅಷ್ಟೆ. ಇವುಗಳಿಂದ ಪ್ರಯೋಜನವಿದೆ ಎನ್ನುವದು ಶುದ್ಧ ತಪ್ಪು.

*ಬಿಂಬನ ಉಪಕಾರ ಎಷ್ಟಿದೆ..?*

ಬಿಂಬನ ಉಪಕಾರ ಎಷ್ಟಿದೆ ಎನ್ನುವದನ್ನು ನಾನು ಹೇಳಲು ಅತ್ಯಂತ ಅಸಮರ್ಥ. ಭಗವದುಪಕಾರವನ್ನು ಹೇಳಲು ನಮ್ಮ ಗುರುಗಳಾದ ನನಗೆ ಪೂ. ಮಾಹುಲೀ ಆಚಾರ್ಯರಿಂದಾರಂಭಿಸಿ (ಎಲ್ಲರಿಗೂ ಅವರವರ ಗುರುಗಳಿಂದಾರಂಭಿಸಿ ) ವಾಯುದೇವರತನಕ ಹೋಗಬೇಕು. ಅವರೆಲ್ಲರಬಳಿ ಸಾಗಿದಂತೆ  ಹೋದಂತೆ ಆ ಭಗವದುಪಕಾರದ ತಿಳುವಳಿಕೆ ಬೆಳೆಯುತ್ತಾ ಸಾಗುತ್ತದೆ. ಕೊನೆಗೆ ವಾಯುದೇವರ ಬ್ರಹ್ಮದೇವರ ಉಪದೇಶದಿಂದಲೇ  ನನ್ನ ಮೇಲಿನ ಉಪಕಾರ ಒಂದು ಹಂತಕ್ಕೆ  ಪೂರ್ಣವಾಗಿ ತಿಳಿಯಬಹುದೇನೋ....

ನಮ್ಮ ಅಸ್ತಿತ್ವ ದೇವರು ಕೊಟ್ಟಿದ್ದು. ನಮ್ಮ ಶ್ವಾಸೋಚ್ಛ್ವಾಸ ದೇವರ ಅಧೀನ. ನಮ್ಮ ಮಸ್ತಿಷ್ಕ, ಮನಸ್ಸು, ಕಣ್ಣು ಮೊದಲಾದ ಇಂದ್ರಿಯ, ದೇಹ ಇವೆಲ್ಲವೂ ದೇವರ ಅಧೀನ. ದೇವರೇ ದಯಪಾಲಿಸಿರುವದು.

ಒಂದು ಮಸ್ತಿಷ್ಕದ ಬಗ್ಗೆ ಇಂದಿನ ವಿಜ್ಙಾನಿಗಳಿಗೂ ಪೂರ್ಣವಾಗಿ ತಿಳಿದು ಬದಿಲ್ಲ. ಒಂದವರ್ಷದ, ಹತ್ತು ವರ್ಷದ, ನೂರುವರ್ಷದ ಅನುಭವಿಸಿದ ಎಲ್ಲವನ್ನೂ ಸಂಸ್ಕಾರ ರೂಪದಿಂದ store ಆಗಿ ಇಟ್ಟಿರುತ್ತದೆ. ಪ್ರತಿಯೊಬ್ಬ ಜೀವರಾಶಿಯದೂ ವಿಭಿನ ಸಂಸ್ಕಾರಗಳು. ಅವೆಲ್ಲವೂ ಆ ಮಸ್ತಿಷ್ಕದಲ್ಲಿ ಎಂದೆಂದಿಗೂ ನಾಶವಾಗದ delete ಆಗದ ಹಾಗೆ ಸುಭದ್ರವಾಗಿ ಇಟ್ಟಿರುತ್ತದೆ. ಒಂದು ಗಣಕಯಂತ್ರವೂ ಸಹ (computer ) ದೇವರು ಕೊಟ್ಟ ಮಸ್ತಿಷ್ಕದಮುಂದೆ ಗತಿತಪ್ಪಿದಂತೆ ನಿಲ್ಲುತ್ತದೆ. ಕಣ್ಣಿನಿಂದ ನೋಡಿದರೆ ಒಂದು ಮಸ್ತಿಷ್ಕ‌ ಅಷ್ಟೇ. ಒಳಗೆ ಇಳಿದು ಅಳಿದು ನೋಡಿದರೆ ಅಗಾಧತೆ ಅಡಗಿದೆ. ಈ ತರಹದ ಮಸ್ತಿಷ್ಕಗಳು ಒಂದಲ್ಲ ಅನಂತ ಇವೆ.

ಮಸ್ತಿಷ್ಕಗಳಂತೆಯೇ ಒಂದೊಂದು ಇಂದ್ರಿಯ, ಅವುಗಳಿಗೆ ಬೇಕಾದ ವಿಷಯ, ಅನುಭವಿಸಲು ದೇಹ ಒಂದೊಂದೂ ಕೊಟ್ಟವ ದೇವರು. ನಿಯಮಿಸುವವ ಅಂತರ್ಯಾಮಿ. ಅವನ ಉಪಕಾರ ಊಹೆಗೂ ನಿಲಕದು. ನಮ್ಮ ತಿಳುವಳಿಕೆ ಬೆಳೆದ ಹಾಗೆ ಅವನ ಉಪಕಾರದ ಮಹಿಮೆ ತಿಳಿಯುವದು ಅಷ್ಟೆ.

*ನಮ್ಮದೊಂದು ಸೌಭಾಗ್ಯ...*

"ಹರಿ ಎಲ್ಲ ದೇಶದಲ್ಲಿ ಇದ್ದಾನೆ. ನಾನಿರುವ ಈ ದೇಶದಲ್ಲಿಯೂ ಇದ್ದಾನೆ. ಅಥವಾ ದೇವರಿರುವ ದೇಶದಲ್ಲಿಯೇ ನಾನಿದ್ದೇನೆ."

"ದೇವರು ಎಲ್ಲ ಕಾದಲ್ಲಿ ಇದ್ದಾನೆ. ಅಂತೆಯೇ ನಾನಿರುವ ಕಾಲದಲ್ಲಿಯೂ ದೇವರು ಇದ್ದಾನೆ. ಅಂದರೆ ದೇವರಿರುವ ಕಾಲದಲ್ಲಿ ನಾನಿದ್ದೇನೆ."

"ದೇವರು ಎಲ್ಲ ವಸ್ತುಗಳಲ್ಲಿ ಇದ್ದಾನೆ. ಅಂದರೆ ದೇವರೂ ನನ್ನಲ್ಲಿಯೂ ಇದ್ದಾನೆ. ದೇವರಲ್ಲಿ ಸಮಗ್ರ ಬ್ರಹ್ಮಾಂಡವಿದೆ. ಅಂದರೆ ದೇವರಲ್ಲಿಯೇ ನಾನೂ ಇದ್ದೇನೆ."

"ದೇವರು ಎಲ್ಲರಿಗೂ ಸ್ವಾಮಿಯಾಗಿದ್ದಾನೆ. ಎಂದರೆ ಎನಗೂ ಸ್ವಾಮಿಯಾಗಿದ್ದಾನೆ. ದೇವರು ಎಲ್ಲರನ್ನೂ ದಾಸರನ್ನಾಗಿ‌ಮಾಡಿಕೊಂಡಿದ್ದಾನೆ. ಎಂದರೆ ನಾನೂ ದೇವರ ದಾಸನೆ." ಇದುವೇ ಎನ್ನದೊಂದು ಸೌಭಾಗ್ಯ.

 ದರ್ಶನ ಬೇಕೆ..??  ದರ್ಶನ ಸಾಧನೆಗಳೇನು... ?? ಉಪಾಸನೆ ನಮ್ಮಿಂದ ಸಾಧ್ಯವಾ... ?? ದರ್ಶನಕ್ಕೆ ಕನಿಷ್ಠ ಸಾಧನೆಗಳು ಯಾವು.. ?? ಸಾಧ್ಯವಾದರೆ ನಾಳಿನ ಲೇಖನದಲ್ಲಿ ಗುರುಗಳ ಅನುಗ್ರಹದಿಂದ ತಿಳಿಯುವ ಪ್ರಯತ್ನ ಮಾಡೋಣ.

*✍🏽✍🏽✍ನ್ಯಾಸ.....*
ಗೋಪಾಲ‌ದಾಸ.
ವಿಜಯಾಶ್ರಮ. ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*