*ಜಾಹ್ನವೀ ಲೋಕಪಾವನೀ.....*

*ಜಾಹ್ನವೀ ಲೋಕಪಾವನೀ.....*


ಭಗವಂತನ ನಿವಾಸಭೂತವಾದ ಮೇರು, ಮಂದರ, ಗಂಧಮಾದನ, ಕೈಲಾಸ, ಮೊದಲಾದ ಬೆಟ್ಟಗಳಿಗೆ ದ್ವಾರಭೂತವಾಗಿದೆ ಹರಿದ್ವಾರ. ವಿಶಾಲಾ ಕ್ಷೇತ್ರದಲ್ಲಿ ವಿರಾಜಮಾನನಾದ ಶ್ರೀನರನಾರಯಣರ ವಾಸಸ್ಥಾನವಾದ ಬದರಿಗೆ ದ್ವಾರಭೂತವಾಗಿದೆ ಹರಿದ್ವಾರ.

*ಮೋಕ್ಷಪ್ರದ ಕ್ಷೇತ್ರ*

ಹರಿದ್ವಾರ ಇದು ಭಗವಂತನಿಂದ ತುಂಬಿದ ಕ್ಷೇತ್ರ. ದಕ್ಷಿಣದ ಊರಿನಲ್ಲಿರುವ ದೇವಸ್ಥಾನದಲ್ಲಿ ಪ್ರತಿಮೆಯಲ್ಲಿ ಮಾತ್ರ ಭಗವತ್ಸನ್ನಿಧಾನವಾದರೆ, ಉತ್ತರದಲ್ಲಿಯ ಪ್ರತಿ ಊರಿಗೆ ಊರೇ ದೇವರ ಪ್ರತಿಮೆ. ಅಲ್ಲೆಲ್ಲ ದೇವರ ಸನ್ನಿಧಾನ.

ಸಂಸಾರದ ಮಾಯೆಯನ್ನು ನಾಶಮಾಡಿ ಮೋಕ್ಷಕೊಡುವಂತಹ ಕ್ಷೇತ್ರವಾಗಿರುವದರಿಂದ  ಈ ಕ್ಷೆತ್ರ ಮಾಯಾಪುರಿ ಎಂದೇ ಪ್ರಸಿದ್ಧಿ ಪಡೆದ ಕ್ಷೇತ್ರ.

*ವಿಷ್ಣುಪದೀ*

ಹರಿದ್ವಾರ ಇಂತಹ ದೊಡ್ಡಕ್ಷೇತ್ರವಾಗಲು  ಮೂಲ ಕಾರಣ *ಗಂಗೆ.* ಗಂಗೆ ಹರಿಯುವ ಕ್ಷೇತ್ರಗಳೆಲ್ಲವೂ ಭಗವತ್ ಕ್ಷೇತ್ರವೇ.  ಆ ಗಂಗೆ ಹುಟ್ಟಿ ಬಂದದ್ದೇ ಭಗವತ್ಪಾದದಿಂದ. ಭಗವತ್ಪಾದವನ್ನು ಆಶ್ರಯಿಸಿದವರೇ ದೊಡಗಡವರಾಗುತ್ತಿರುವಾಗ, ಭಗವತ್ಪಾದದಿಂದ ಹುಟ್ಡಿ ಅಲ್ಲಿಯೇ ಮುಕ್ತಿ ಪಡೆಯುವ ಗಂಗೆ ಜಗತ್ತಿನಲ್ಲಿಯೇ ಮಹಾನ್ ನದಿ ಆಗಿ ವಿರಾಜಮಾನಳಾದಳು.

*ಗಂಗೆಯ ಜನನ*

ಗಂಗೆಯ ಹುಟ್ಟು ಒಳಗಿನ ಹೊರಗಿನ ಅಂಧಕಾರವನ್ನು ನಾಶಮಾಡುವ ಭಗವತ್ಪಾದದಿಂದ. ಭಗವತ್ಪಾದದಿಂದ ಹುಟ್ಟಿದ ಕಾರಣವೇ ಗಂಗೆ ಪರಮ ಪವಿತ್ರ.

ಗಂಗೆ ಬ್ರಹ್ಮಾಂಡದ ಹೊರೆಗೆ ಇದ್ದವಳು. ಒಳಗೆ ಧಾವಿಸಿಬಂದವಳು. ಎಲ್ಲೆಡೆ ವ್ಯಾಪಿಸಿರುವವಳು. ಅಂತೆಯೇ ಯೋಗ್ಯ ಯಾವ ದೇಶದಲ್ಲಿ ಸ್ಮರಿಸಿದರೂ ಫಲ ಕೊಡುವವಳು. ಮೇಲಿನ ಕೆಳಗಿನ ಲೋಕಗಳಲ್ಲಿ ಇರುವವಳು.

*ಪರಮಮಂಗಳ ಸ್ವರೂಪಿಣೀ*

ಭಗವತ್ಪಾದದಿಂದ ಹುಟ್ಟಿಬಂದದ್ದರಿಂದಲೇ ಬ್ರಹ್ಮದೇವರು ಈ ಗಂಗೆಯಿದಲೇ ಭಗವತ್ಪೂಜೆ ಮಾಡಿದರು. ಆ ಕಾರಣದಿಂದಲೇ ಶಿವ ರುದ್ರದೇವರು ತಲೆಯಲ್ಲಿ ಹೊತ್ತ. ಅಷ್ಟೇ ಅಲ್ಲ ಶಿವ ಸ್ವಯಂ ಮಂಗಳಸ್ವರೂಪನೂ ಆದ. ವಿಶಬಾಧೆಯನ್ಮೂ ಪರಿಹರಿಸಿಕೊಂಡ. ಹಿರಿಯರಿಗೂ ಗಂಗೆಯಮೇಲೆ ಕರುಣೆ ಮೂಡುವಷ್ಟು  ಪರಮ ಮಂಗಳಸ್ವರೂಪಿಣೀ.

*ಕೂಗಿದರೂ ಪಾಪ ಪರಿಹರಿಸುವವಳು*

ಗಂಗೇ ಗಂಗೆ  ಎಂದು ಕೂಗಿದ ಮಾನವ ನೂರು ಯೋಜನ ದೂರದಲ್ಲಿದ್ದರೂ ಎಲ್ಲ ಪಾಪಗಳಿಂದ ಮುಕ್ತನಾಗಿ, ವಿಷ್ಣುಲೋಕಕ್ಕೆ ಸೇರುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ಗಂಗೆಯಲ್ಲಿಯೇ ಮಿಂದರೆ ವಿಷ್ಣುವೇ ಓಡಿ ಬರುತ್ತಾನೆ. ಇದು ಗಂಗೆಯ ಮಹಿಮೆ.

*ಗಂಗೆ ಎಂದರೆ ವಿಷ್ಣುವಿಗೂ ತುಂಬ ಪ್ರೀತಿ.*

ಗಂಗೆ ಭಗವಂತನ ಸಾಕ್ಷಾತ್ ಮಗಳು. ಭಗವಂತನ ಸುಷುಮ್ನಾ ನಾಡಿಯಿಂದ ಹುಟ್ಡಿ ಬಂದವಳು ಗಂಗೆ. ಅಲ್ಲಿಯೇ ಮುಕ್ತಿ ಪಡೆಯುವಳು. ಆ ಗಂಗೆಯೇ  ನಮ್ಮ ಸುಷುಮ್ನಾನಾಡಿಯಲ್ಲಿಯೂ ವ್ಯಾಪಿಸಿ ಇದ್ದಾಳೆ.

ಆ ಕಾರಣವೇ ಗಂಗೆ ಭಗವಂತನಿಗೆ ಅಷ್ಟು ಪ್ರೀತ್ಯಾಸ್ಪದಳು. ಆಗಿರುವದರಿಂದಲೇ ನಿತ್ಯ ಭಗವತ್ಸ್ನಾನಕ್ಕೆ ಗಂಗೆಯೇ ಬೇಕು. ಗಂಗೆಯಿಲ್ಲದೆ ದೇವರ ಅಭಿಷೇಕವೂ ಇರುವದಿಲ್ಲ.

*ಸಿದ್ಧರಿಗೆ ಮಾತ್ರ ಲಭ್ಯಳು.....*

ಗಂಗೆ ಭುವಿಗಿಳಿದು ಬಂದಿದ್ದೇ ಸಗರ ಮಹಾರಾಜನ ತಪಸ್ಸಿನಿಂದ ಆರಂಭಿಸಿ ಅನೇಕರ ಅತೀ ದೊಡ್ಡ ತಪಸ್ಸಿನ ಪ್ರಭಾವದಿಂದ. ಆರವತ್ತು ಎಪ್ಪತ್ತುವಸಾವಿರ ವರ್ಷಗಳ ತಪಸ್ಸಿನ ಬಲದಿಂದಲೇ ಗಂಗೆ ಬುವಿಯಲ್ಲಿ  ಹರಿದು ಬಂದಿದ್ದು. ತಾನು ಬರುವದಕ್ಕೇ ಇಷ್ಟು ತಪಸ್ಸು ಬೇಕಾದಾಗ, ತನ್ನಲ್ಲಿ ಬರುವವರಿಗೂ ಅದೇ ತಪಸ್ಸಿನಿಂದಲೇ ಸಾಧ್ಯ.

*ಪರಿಶುದ್ಧ.. ಮಹಾ ಫಲಕಾರಿ*

ಶುದ್ಧ ಹಾಗೂ ಆರೋಗ್ಯಪೂರ್ಣ ನೀರಿನ ಅಗತ್ಯನಮಗೆ ಇಂದು ಇದೆ. ಆ ಪರಿಶುದ್ಧ ಹಾಗೂ ಅನೇಕ ಗಿಡಮೂಲಿಕೆಗಳ ರಸದಿಂದ ಯುಕ್ತವಾದ ಗಂಗೆ ಶುದ್ಧ ಹಾಗೂ ಆರೋಗ್ಯ ಪೂರಿತ. ಅಂತೆಯೇ
ಈ ಗಂಗೆಯಲ್ಲಿಯೇ ವಸಿಷ್ಠ, ವಿಶ್ವಾಮಿತ್ರ, ಮೊದಲಾದ ಸಕಲ ಋಷಿಗಳೂ ನಿತ್ಯ ಸಾಯಂ ಆಹ್ನೀಕಕ್ಕೆ ಆಗಮಿಸುತ್ತಾರೆ.  ಅಂತಹ ಉತ್ತಮೋತ್ತಮ ಸಾಧ್ವಿ ಗಂಗೆ.

*ಭಗವತ್ಪ್ರತಿಮೆ ಗಂಗೆ....*

ಎಲ್ಲ ದೇಶ, ಕಾಲ, ಅವಸ್ಥೆ ಮೊದಲಾದ ಸಕಲದರಲ್ಲಿಯೂ ಎಲ್ಲೆಡೆ ವ್ಯಾಪಿಸಿದ ಶ್ರೀಹರಿಯೇ  ಗಂಗೆಯ ಕಣ ಕಣದಲ್ಲಿಯೂ ಚಿನ್ಮಯ ಸ್ವರೂಪಿ ದ್ರವರೂಪದಿಂದ ವ್ಯಾಪಿಸಿ ಇದ್ದಾನೆ. ಆದ್ದರಿಂದ ಗಂಗೆ ಶ್ರೀಹರಿಯ ಉತ್ತಮ‌ಹಾಗೂ ಶ್ರೇಷ್ಠ ಪ್ರತಿಮಾ.

*ನಮ್ಮ ಗಂಗೆ ಜಗನ್ಮಾನ್ಯಳು..*

ಬಲಿಚಕ್ರವರ್ತಿಯ ಯಾಗ ನಿಲ್ಲಿಸಲು ಅವತಾರವೆತ್ತಿ, ವಾಮನರೂಪದಿಂದ ಭಿಕ್ಷೆ ಬೇಡಲು ಬಂದ ಜಗನ್ನಿಯಾಮಕ ಶ್ರೀಹರಿ. ಆ ಭಗವಂತನ ಅನುಗ್ರಹ, ದಿವ್ಯ ಸಾಮರ್ಥ್ಯದ ಬಲದಿಂದಲೇ ಬ್ರಹ್ಮಾಂಡ ಕಟಾಹದ ಹೊರಗಿದ್ದ ಗಂಗೆ ತ್ರಿವಿಕ್ರಮರೂಪಿಯ ಪಾದಸ್ಪರ್ಶದಿಂದ ಬ್ರಹ್ಮಾಂಡದ ಒಳಗೆ ಇಳೊದಳು.  ಅಂತೆಯೇ ಈ ಗಂಗೆಯಿಂದಲೇ ಬ್ರಹ್ಮಧೆವರು ಭಗವತ್ಪೂಜೆ ಕೈಕೊಂಡರು. ಆ ಜಲವನ್ನೇ ರುದ್ರದೇವರು ಧರಿಸಿದರು. ಸರಸ್ವತೀದೇವಿ ಗಂಗೆಯೊಟ್ಟಿಗೆ  ಸ್ಪರ್ದೆ ಮಾಡಿತಂತೆ, ನದಿಯಲ್ಲಿ ನಾನೇ ಉತ್ತಮಳಾಗಿರಬೇಕು ಎಂದು ತಪಸ್ಸುಗೈದಳು.

*ಆಹ್ನೀಕಕ್ಕೆ ಗಂಗೆಯೇ ಬೇಕು.....*

ಮಹಾಭಾರತ ಒಂದು ಮಾತು ತಿಳಿಸುತ್ತದೆ ವಸಿಷ್ಠ ವಾಮದೇವ ಮೊದಲಾದ ಋಷಿಮುನಿಗಳು ಸಂಧ್ಯಾವಂದನೆಗೋಸ್ಕರ ಗಂಗೆಗೆ ಧಾವಿಸಿ ಬರುವರು ಎಂದು. ಹೀಗೆ ಹದಿನಾಲಕು ಲೋಕದ ಅತಿಶ್ರೇಷ್ಠ ಉತ್ತಮರಿಂದಲೂ ಮಾನ್ಯಳಾದವಳ ಶ್ರೀಗಂಗಾದೇವಿ.

*ಗಂಗಾದೇವಿಯ ಇತರ ನಾಮಗಳು*

ಭಾಗೀರಥಿ, ಭೋಗವತಿ, ಜಾಹ್ನವೀ, ತ್ರಿದಶೇಶಗವರಿ, ವಿಷ್ಣುಪಾದಾಬ್ಜಸಂಭೂತೆ, ಗಂಗಾ, ತ್ರಿಪಥಗಾಮಿನೀ, ಅಲಕನಂದಾ, ನಂದಿನೀ, ನಲಿನಿ, ಸೀತಾ, ಭದ್ರಾ, ಮಾಲತೀ, ಮಲಾಪಹಾ, ಇತ್ಯಾದಿ ನೂರಾರು ನಾಮಗಳಿಂದ ಪ್ರಸಿದ್ಧಳಾಗಿರುವವಳು.

ಇಂತಹ  ಗಂಗೆಯ ಸ್ಮರಣೆ ಮಾಡುವದರಿಂದ, ನೋಡುವದರಿಂದಲೇ ಸಕಲವಿಧ ಪಾಪಪರಿಹಾರವಾಗಿ, ವಿಷ್ಣು ಲೋಕವೇ ಫಲವಾಗಿ ಬರುತ್ತದೆ ಎಂದು ಶಾಸ್ತ್ರ ತಿಳಿಸಿ ಕೊಡುತ್ತದೆ. ಇಂದಿನಿಂದ ನಿತ್ಯ ಸ್ನಾನಕಾಲದಲ್ಲಿ ಸ್ಮರಿಸುವ ಬುದ್ಧಿಕೊಡು ಎಂದೂ ಪ್ರಾರ್ಥಿಸುತ್ತಾ ಆ ಗಂಗೆ ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸೋಣ....

ಜೈ ಜೈ ಗಂಗೆ !!! ಹರ ಹರ ಗಂಗೆ !!!

*✍🏽✍🏽✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Unknown said…
Hare srinivasa
Unknown said…
Hare srinivasa

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*