*ಓ ಶಿಷ್ಟೇಷ್ಟ !!! ನಿನಗೆ ಎನ್ನ ನಮನಗಳು*

*ಓ ಶಿಷ್ಟೇಷ್ಟ !!! ನಿನಗೆ ಎನ್ನ ನಮನಗಳು*

ವಿಷ್ಣುಸಹಸ್ರನಾಮದಲ್ಲಿ ಒಂದು ನಾಮ *ಶಿಷ್ಟೇಷ್ಟ* ಎಂದು. ಶಿಷ್ಟರು ಯಾರೋ, ಶಿಷ್ಟಸಮ್ಮತರು ಯಾರೋ ಅವರೇ ಭಗವಂತನಿಗೆ ಇಷ್ಟರು. ಭಗವಂತನಿಗೆ ಇಷ್ಟರೋ ಅವರೇ ಜಗತ್ತಿನಲ್ಲಿ ಪ್ರೇಷ್ಠರು ಎಂದು ಕರಿಯಬಹುದು.  ಶಿಷ್ಟರನ್ನೇ ಇಷ್ಟನನ್ನಾಗಿ ಮಾಡಿಕೊಂಡ ಶ್ರೀಹರಿ ಇಷ್ಟೇಷ್ಟ....

ಶಿಷ್ಟರು ಯಾರು... ??

ಮಹಾಭಾರತ ಸುಂದರವಾಗಿ ಉತ್ತರಿಸುತ್ತದೆ....
"ದಾತಾರಃ ಸಂವಿಭಕ್ತಾರೋ
ದೀನಾನುಗ್ರಹಕಾರಿಣಃ |
ಸರ್ವಪೂಜ್ಯಾಃ ಶೃತಧನಾಃ
ತಥೈವ ಚ ತಪಸ್ವಿನಃ
ಸರ್ವಭೂತದಯಾವಂತಃ
ತೇ ಶಿಷ್ಟಾಃ ಶಿಷ್ಟಸಂಮ್ಮತಾಃ||" ಎಂದು.

*ದಾತಾರಃ*  ನಿತ್ಯ ದಾನಶೀಲರಾಗಿರಬೇಕು. ಹೇಳುವವರು, ಕೇಳುವವರು ಸಿಗಬಹುದು. ಕೊಡುವವರು ಸಿಗುವದು ಕಷ್ಟ. ಆದರೆ ಕೊಡಗೈಬಂಟ ಯಾರೋ ಅವನೇ.......

ದಾನ ಮಾಡುವ ಭರದಲ್ಲಿ ಇದ್ದಬಿದ್ದ ಎಲ್ಲವನ್ನೂ ದಾನಮಾಡಿ ತಾನು ರೋಡಿಗೆ ಬರುವಂತಾಗಿರಬಾರದು. *ಸಂವಿಭಕ್ತಾರಃ* ಕುಟುಂಬ ಪೋಷಣೆಗೆ, ಯಜ್ಙ ಯಾಗಕ್ಕೆ, ಅತಿಥಿಸತ್ಕಾರಕ್ಕೆ, ಗುರುದಕ್ಷಿಣೆಗೆ ಮುಂತಾದ ಶಾಸ್ತ್ರೋಕ್ತವಾಗಿ ಘಳಿಸಿದ ಹಣವನ್ನು ವಿಭಾಗವನ್ನು ಮಾಡಿಕೊಂಡು ದಾನ ಮಾಡುವವರು...

*ದೀನಾನಾಂ ಅನುಗ್ರಹಕಾಂಕ್ಷಿಣಃ* ಸಾಮಾನ್ಯವಾಗಿ ತನ್ನವರ ಮೇಲೆ ದಯೆ ಹೆಚ್ಚು. ತನ್ನವರಲ್ಲದ  ದೀನರಮೇಲೂ ದಯಾಪರರು ಯಾರು ಆಗಿದ್ದಾರೆಯೋ ಅವರೂ.......

*ಶ್ರುತಧನಾಃ* ವಿದ್ಯೆಯೇ ಶ್ರೇಷ್ಠ ಧನ  ಎಂದು ಭಾವಿಸಿ, ಗುರುಶುಶ್ರೂಷೆಯನ್ನು ಮಾಡಿ, ಆ ಗುರುಗಳಿಂದ ನಿರಂತರ ಶ್ರವಣಮಾಡಿ, ವೇದ ವೇದಾಂಗ ತತ್ವಜ್ಙಾನ ವಿದ್ಯೆಯನ್ನು  ಸಂಪಾದಿಸಿಕೊಂಡು "ವಿದ್ಯಾವಂತ" ಎಂದು ಯಾರು ಆಗಿದಾರೆಯೋ ಅವರೂ,.......

ವಿದ್ಯಾಧನವನ್ನು ಸಂಪಾದಿಸಿದ್ದರಿಂದಲೇ ವಿನಯಾದಿ ಸರ್ವಗುಣಸಂಪನ್ನನಾಗಿದ್ದು  *ಸರ್ವಪೂಜ್ಯಾಃ* ಎಲ್ಲರಿಂದಲೂ ಯಾರು ಮಾನ್ಯರೋ ಪೂಜ್ಯರೋ ಅವರೂ........

*ತಪಸ್ವಿನಃ* ಈಗಿನಯುವಕ ಈಗಲೇ ಫಲಕೊಡುವಂತಹ ಏನನ್ನೂ ಸಾಧಿಸಲೂ ಸಿದ್ದ. ಈಗಿನ ಯಾರು ಏನು ಹೇಳಿದರೂ  ಕೇಳಲು ಸಿದ್ಧ.  ಆದರೆ ಹಿಂದಿನ ಕಾಲದ,  ತಪಸ್ಸಿನಿಂದಲೇ ಸರ್ವಸ್ವವನ್ನೂ ಪಡೆದ, ತಾಪಸಿಗಳು ಹೇಳಿದ ತಪಸ್ಸು ಮಾಡಲು ಯಾರೂ ಸಿದ್ಧರಾಗರು. ಇದು ಅತ್ಯಂತ ವಿಷಾದದ ಸಂಗತಿ.   ಆದರೆ ಯಾರು ನಿರಂತರ ದಿನದ ಕೆಲಹೊತ್ತು ಆದರೂ ಗಾಯತ್ರೀ, ನಾರಾಯಣ, ವೇದವ್ಯಾಸ, ಕೃಷ್ಣ ಮೊದಲಾದ ಮಂತ್ರಗಳ ಸ್ತ್ರೀಯರು ರಾಮಕೃಷ್ಣ ಮಂತ್ರದ ಜಪಮಾಡುವ ಮುಖಾಂತರವಾದರೂ ತಪಸ್ವಿಗಳು ಎಂದು ಆಗಿರುವವರೋ ಅವರೇ.......

*ಸರ್ವಭೂತದಯಾವಂತಃ* ತನಗೆ ಸಮೃದ್ಧಿಬೇಕು. ತನ್ನವರಿಗೆ ಸಮೃದ್ಧಿಬೇಕು. ಇದು ಸರ್ವಸಾಮಾನ್ಯ. ಆದರೆ ಎದುರಿಗೇ ಒಬ್ಬ ಮನುಷ್ಯ, ಒಂದು ಪ್ರಾಣಿ, ಒಂದು ಮೃಗ ಒದ್ದಾಡ್ತಾ ಇರುವಾಗ ಆ ಮನುಷ್ಯ ಮೃಗ ಪ್ರಾಣಿಗಳನ್ನು ಅಲಕ್ಷ್ಯ ಮಾಡದೇ ದಯೆಮಾಡಿ, ಉಪಕಾರ ಮಾಡುವ ಮಹಾನ್ ವ್ಯಕ್ತಿ ಯಾರೋ ಅವನು......

*ಶಿಷ್ಟಸಂಮ್ಮತಾಃ* ಮೇಲೆ ತಿಳಿಸಿದ ಎಲ್ಲ ಗುಣಗಳನ್ನು ರೂಢಿಸಿಕೊಂಡವರು ಯಾರು ಇದ್ದಾರೆಯೋ ಅಂತಹ ಗುಣವಂತರಿಗೆ, ಸ್ವಯಂ ತಾನು ಮೇಲೆ ತಿಳಿಸಿದ ಎಲ್ಲ ಗುಣವಂತನಾಗಿ ಇದ್ದು, ಅವರಿಗೆ ಸಮ್ಮತನೂ ಆಗಿದ್ದರೆ ಅಂತಹ ವ್ಯಕ್ತಿಯನ್ನೂ......

ಈ ರೀತಿಯಾಗಿ ಮಹಾಭಾರತ ಮೇಲೆ ತಿಳಿಸಿದ ಗುಣವಂತರು ಯಾರೋ ಅವರೇ *ಶಿಷ್ಟರು.* ಅಂತಹ ಶಿಷ್ಟರನ್ನೇ ಶ್ರೀಹರಿ ತಾನು ಇಷ್ಟಪಡುತ್ತಾನೆ. ಅಂತೆಯೇ ಶ್ರೀಹರಿ *ಶಿಷ್ಟೇಷ್ಟ.*  ಶಿಷ್ಟರೇ ಶ್ರೀಹರಿಯನ್ನು ಇಷ್ಟಪಡುವವರು ಆಗಿರುತ್ತಾರೆ.

*ನಾವು ಶಿಷ್ಟರಾದರೆ, ಶ್ರೀಹರಿಗೆ ಇಷ್ಟ,  ಶ್ರೀಹರಿಯನ್ನೇ ಇಷ್ಟಪಡುವವರು ಯಾರೋ ಅವರೇ ಶಿಷ್ಟರಾಗಲು ಗುಣವಂತರಾಗುತ್ತಾರೆ. ಶಿಷ್ಟರಾಗಿ, ಇಷ್ಟರಾದ ಮನುಜರಿಗೆ ಕಷ್ಟ ಎಂಬುವದೇ ಇರುವದಿಲ್ಲ. ಇದುವೂ ಅಷ್ಟೇ ದಿಟ.*

ನನ್ನಂತಹ ನನ್ನನ್ನೂ ಶಿಷ್ಟನನ್ನಾಗಿ ಮಾಡುವ ಓ ಶಿಷ್ಟೇಷ್ಟನೇ !! ನಿನಗೆ ಅನಂತಾನಂತ ವಂದನೆಗಳು.

*✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*