*ಮಾ ರೀರಿಶಿಷ್ಟ ನಿಗಮಸ್ಯ ಗಿರಾಂ ವಿಸರ್ಗಃ....*

*ಮಾ ರೀರಿಶಿಷ್ಟ ನಿಗಮಸ್ಯ ಗಿರಾಂ ವಿಸರ್ಗಃ....*

ಶ್ರೀಮದ್ಭಾಗವತದಲ್ಲಿ ಬಂದ, ಸ್ವಯಂ ಬ್ರಹ್ಮದೇವರು ಮಾಡಿದ ಒಂದು ಅದ್ಭುತ ಪ್ರಾರ್ಥನೆ.

ದುರ್ಗಾದೇವಿಯ ಪ್ರಾರ್ಥನೆಯಂತೆ ದೇವರು ಜಗತ್ತನ್ನು ಸೃಷ್ಟಿಸಲು ಮನಸ್ಸು ಮಾಡಿದ. ಅವನಿಚ್ಛೆಯಂತೆಯೇ ಸಂಪೂರ್ಣ ೨೪ ತತ್ವಾತ್ಮಕ ಜಗತ್ತು ಸೃಷ್ಟಿ ಆಯಿತು. ಆ ಬ್ರಹ್ಮಾಂಡದಲ್ಲಿ ಬ್ರಹ್ಮದೇವರನ್ನು ತನ್ನ ನಾಭಿಕಮಲದಿಂದ ಸೃಷ್ಟಿಸಿದ. ಆ ಬ್ರಹ್ಮದೇವರು ನಾಲಕು ಮುಖಗಳಿಂದ ನಿರಂತರ ಋಗ್ವೇದ ಯಜುರ್ವೇದ ಸಾಮವೇದ ಇವಗಳಿಂದ ಭಗವದಾರಾಧನೆ, ಜ್ಙಾನಾಭಿವೃದ್ಧಿ, ಭಕ್ತಿಯ ಸಮೃದ್ಧಿ, ಅತಿಶಯಿತ ವಿಷ್ಣುಪ್ರೀತಿ ಉವುಗಳನ್ನು ಸಂಪಾದಿಸುತ್ತಾ ತೊಡಗಿದರು.

ಹೇ ಮಗನೇ !! ಬ್ರಹ್ಮಾ  !! ನೀನು ಸೃಷ್ಟಿಕರ್ತನ ಹಿರಿಯ ಮಗನು ಆಗಿರುವದರಿಂದ, ಸೃಷ್ಟಿಕರ್ತೃವಾದ ಬ್ರಹ್ಮರೂಪದ ಅಧಿಷ್ಠಾನನೂ ಆಗಿರುವದರಿಂದ ಈ ಸಮಗ್ರ ಜಗತ್ತನ್ನು ಸೃಷ್ಟಿಸು ಎಂದು ಆಜ್ಙಾಪಿಸಿದ ಶ್ರೀಮನ್ನಾರಾಯಣ. ಆಜ್ಙೆಯನ್ನು ಹೊತ್ತ ಬ್ರಹ್ಮದೇವರು *ಮಾ ರೀರಿಶಿಷ್ಟ ನಿಗಮಸ್ಯ ಗಿರಾಂ ವಿಸರ್ಗಃ....*  "ಜಗತ್ತಿನ ಸೃಷ್ಟಿಯ ದೊಡ್ಡ ಜವಬ್ದಾರಿ ನಿನ್ನ ಪ್ರೀಗೋಸ್ಕರ ಹೊರುವೆ. ಆದರೆ ಅತಿಶಯಿತಪ್ರೀತಿಯನ್ನೇ ದಯಪಾಲಿಸುವ,  ಮಹಾಫಲವನ್ನೇ ಕೊಡುವ ನಿನ್ನ ಮಹಿಮಾ ಜ್ಙಾನಕ್ಕೆ ಕಾರಣವಾದ ಚತುರ್ವೇದಗಳ ಪಠಣ, ಜಪ, ಧ್ಯಾನ, ಚಿಂತನ, ಇವುಗಳು ಸ್ವಲ್ಪವೂ ಕಡಿಮೆಯಾಗಬಾರದು. ಇನ್ನೂ ಅಭಿವೃದ್ಧಿಸುವಂತೆಯೇ ಆಗಬೇಕು. ಈ ಅನುಗ್ರಹವನ್ನು ಮಾಡು"  ಹೀಗೆ ಪ್ರಾರ್ಥಿಸುತ್ತಾ ಜಗತ್ಸೃಷ್ಟಿಯ ಕಾರ್ಯದಲ್ಲಿ ತೊಡಗುತ್ತಾರೆ.... .

ಸಾಧಕರಾದ ನಾವು ಸಾಧನೆಯಲ್ಲಿ ತೊಡಗಿದಾಗ, ಲೌಕಿಕ ಕೆಲಸವೇನಾದರೂ ಬಂದರೆ ಮೊಟ್ಟಮೊದಲು ತಿಲಾಂಜಲಿ ಇಡುವದು ಜ್ಙಾನಕ್ಕೇ.  ಇದು ಅತ್ಯಂತ ನಿಶ್ಚಿತ. ಆದ್ದರಿಂದ ಬ್ರಹ್ಮದೇವರು ಜ್ಙಾನಕ್ಕೆ ತೊಂದರೆ ಆಗದರುವಂತೆ ಅನುಗ್ರಹಿಸು ಎಂದು ಬೇಡಿಯೇ ಬಿಡುತ್ತಾರೆ.

ಬ್ರಹ್ಮದೇವರು ಜ್ಙಾನಕ್ಕೆ  ಅಷ್ಟು ಪ್ರಾಶಸ್ತ್ಯ ಯಾಕೆ  ಕೊಟ್ಟರು ...?? ಮಹಾಫಲವಾದ ಭಗವತ್ಪ್ರಸಾದಕ್ಕಾಗಿ, ಭಗವತ್ಸಂತೋಷಕ್ಕಾಗಿ ಜ್ಙಾನ ಒಂದೇ ಅನಿವಾರ್ಯ ಎಂದೇ ತಿಳಿದ ಬ್ರಹ್ಮದೇವರು ಜ್ಙಾನಕ್ಕೆ ಅಷ್ಟು ಪ್ರಾಶಸ್ತ್ಯವನ್ನು ಕೊಟ್ಟರು.

ಹೆಚ್ಚು ಹೆಚ್ಚಿನ ಫಲದ,  ವಿಷ್ಣುಪ್ರೀತಿಯಿಂದಾರಂಭಿಸಿ ಯಾವುದೇ ಫಲವಿರಬಹುದು ಅಂತಹ ಫಲದ ಅಪೇಕ್ಷೆ ಇರುವ ವ್ಯಕ್ತಿ, ಹೆಚ್ಚೆಚ್ಚು ಜ್ಙಾನ ಸಂಪಾದಿಸಿಕೊಳ್ಳುವದು ಅನಿವಾರ್ಯ. ಇದು ಬ್ರಹ್ಮದೇವರ ವಿಚಾರ. ಅಂತೆಯೇ ಪೂರ್ಣ ಜ್ಙಾನ, ಪರಿಪೂರ್ಣಭಕ್ತಿ, ಪರಿಪೂರ್ಣ ಸುಖ ಅವರೊಬ್ಬರಿಗೇ ಒಲಿದು ಬಂತು.

ಗುರುಗಳಾದ, ಪೂಜ್ಯ ಮಾಹುಲೀ ಆಚಾರ್ಯರು ಒಂದು ಉಪನ್ಯಾಸದಲ್ಲಿ *ಹೆಚ್ಚು ಘಳಿಸುವದಕ್ಕಾಗಿ, ಹೆಚ್ಚು ಕಲಿಯಿರಿ* ಹೀಗೆ ಉಪದೇಶವನ್ನೂ ಕೊಟ್ಟಿದಾರೆ.

'ನಮ್ಮ ಅಮೋಘವಾದ ಬುದ್ಧಿವಂತಿಕೆ, ಜ್ಙಾನ, ಸಮಯ ಇವೆಲ್ಲವುಗಳನ್ನೂ "ಹೊಸತನ್ನು ಕಲಿಯುವದರಲ್ಲಿ, ಕಾರ್ಯಕೌಶಲವನ್ನು ಉನ್ನತಮಟ್ಟಕ್ಜೆ ಹೆಚ್ಚಿಸಿಕೊಳ್ಳುವದರಲ್ಲಿ" ಹೂಡಿಕೆ ಮಾಡುವದೇನಿದೆ ಅತ್ಯಂತ ಜಾಣ ಹೂಡಿಕೆ ಎಂದೆನಿಸುತ್ತದೆ.'

ಸಮಯದಮೇಲೆ ನಿಯಂತ್ರಣ ಸಾಧಿಸಿದಷ್ಟು, ಗುರಿಸಾಧಿಸುವದು ಸರಳವಾಗುತ್ತದೆ. ಆದ್ದರಿಂದ ಇಂದಿನಿಂದಲೇ ಹೆಚ್ಚುಘಳಿಸುವ ಅಪೇಕ್ಷೆ ಇರುವ ನಾವೆಲ್ಲರೂ ಹೊಸತನ್ನು ಕಲಿಯುವದಕ್ಜಾಗಿ ೩೦ ನಿಮಿಷದ ಹೆಚ್ಚಿನ ಹೂಡಿಕೆಯನ್ನು ಆರಂಭಿಸೋಣ. ಜ್ಙಾನ, ಭಕ್ತಿ, ಸೌಖ್ಯ, ಧನ, ಪ್ರತಿಷ್ಠೆ, ಇತ್ಯಾದಿ ಇತ್ಯಾದಿ ಹೆಚ್ಚೆಚ್ಚು ಸಂಪಾದಿಸಿಕೊಳ್ಳಲು ಸುಲಭಮಾಡಿಕೊಳ್ಳೋಣ.

ಅದಕ್ಕಾಗಿ ನಮ್ಮ ಹಣೆಬರಹವನ್ನು ಬರೆಯುವ ಬ್ರಹ್ಮದೇವರಲ್ಲಿ, ಮೋಕ್ಷಾದಿ ಪುರುಷಾರ್ಥಗಳನ್ನು ದಯಪಾಲಿಸುವ ಶ್ರೀಮನ್ನಾರಾಯಣನಲ್ಕಿ *ಮಾ ರೀರಿಶಿಷ್ಟ ನಿಗಮಸ್ಯ ಗಿರಾಂವಿಸರ್ಗಃ* ಎಂಥದೇ ಸಮಸ್ಯೆ ಎದುರಾದರೂ ತತ್ವಜ್ಙಾನ ಸಂಪಾದನೆ ಒಂದು ದಿನವೂ ನಿಲ್ಲಕೂಡದು ಹಾಗೆ ಅನುಗ್ರಹಿಸು ಎಂದು ನಿತ್ಯ ಪ್ರಾರ್ಥಿಸುತ್ತಾ ಕೋಟಿ ಕೋಟಿ, ಅನಂತಾನಂತ ವಂದನೆಗಳನ್ನು ಸಲ್ಲಿಸೋಣ....

*✍🏽✍🏽✍ನ್ಯಾಸ....*
ಗೋಪಾಲದಾಸ.
(ವಿಜಯಾಶ್ರಮ, ಸಿರವಾರ)

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*