*ಏನಿದೆ ಅದನ್ನೇ ಅಭಿವ್ಯಕ್ತಗೊಳಿಸುವದು ಮನಸ್ಸು*
*ಏನಿದೆ ಅದನ್ನೇ ಅಭಿವ್ಯಕ್ತಗೊಳಿಸುವದು ಮನಸ್ಸು* ಮನಸ್ಸು ಇದೊಂದು ಅಮೂಲ್ಯವಾದ ಪದಾರ್ಥ. ಒಂದು ಬಾರಿ ಮನಸ್ಸಿನಲ್ಲಿ ಏನೋ ಒಂದು ವಿಷಯ, ಯಾವುದೋ ರೀತಿಯಲ್ಲಿ ಒಳ ಸೇರಿತೋ ಅದು ಮನಸ್ಸಿನಲ್ಲಿ ಸಂಸ್ಕಾರ ರೂಪದಿಂದ ಶಾಶ್ವತವಾಗಿ ಉಳಿದು ಬಿಡುತ್ತದೆ. ಆಗಾಗ ಅಭಿವ್ಯಕ್ತಗೊಳಿಸುತ್ತಾ ಇರುತ್ತದೆ. ಮನಸ್ಸಿನಲ್ಲಿ ಒಮ್ಮೆ ಒಂದು ವಿಷಯ ಸೇರಿತು ಎಂದಾದರೆ ಆ ವಿಷಯವೆಂಬ ಹುಳ ಒಳಗೆ ಕೊರೆಯಲು ಆರಂಭಿಸುತ್ತದೆ. ಆ ವಿಷಯವನ್ನು ಒಳಗೇ ಇಟ್ಟು ಕೊಳ್ಳುತ್ತೇನೇ ಎಂಬುವದೂ ಅಸಾಧ್ಯದ ಮಾತೆ. ಒಂದಿಲ್ಲ ಒಂದು ರೂಪದಿಂದ ಅಭಿವ್ಯಕ್ತವಾಗಲೇ ಬೇಕು. ಆಗಿಯೇ ಆಗುತ್ತದೆ. ಸಕಾರಾತ್ಮಕ ವಿಷಯಗಳು ಮನಸ್ಸಿನಲ್ಲಿ ಸೇರಿದ್ದರೆ, ಸಾಕಾರಾತ್ಮಕ ವಿಚಾರಗಳೇ ಹೊರಬರುತ್ತವೆ. ನಕಾರಾತ್ಮಕ ವಿಷಯಗಳು ಸೇರಿದ್ದರೆ ನಕಾರಾತ್ಮಕ ವಿಚಾರಗಳೇ ಅಭಿವ್ಯಕ್ತವಾಗುವದು. ಗುರು ದೇವತಾ ದೇವರುಗಳ, ಧರ್ಮ ಶಾಸ್ತ್ರ, ತಂದೆ ತಾಯಿ ಅತ್ತೆ ಮಾವ, ಅಕ್ಕ ತಂಗಿ, ಅಣ್ಣ ತಮ್ಮ, ಆತ್ಮೀಯರು ಹಿತೈಷಿಗಳು ಇತ್ಯಾದಿ ಅಂತರಂಗದ ಅಥವಾ ಬಹಿರಂಗದ ವ್ಯಕ್ತಿಗಳ ವಿಷಯಕ ಸಕಾರಾತ್ಮಕ positive ವಿಷಯಗಳು ಸೇರಿದ್ದರೆ ಸಕಾರಾತ್ಮಕವಾಗಿಯೇ ಮಾತಾಡುವ. ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ. ನಕಾರಾತ್ಮಕ negative ಆಗಿದ್ದರೆ ನಕಾರಾತ್ಮಕವಾಗಿಯೇ. ಒಂದಂತೂ ನಿಶ್ಚಿತ ಅಭಿವ್ಯಕ್ತಗೊಳಿಸದೇ ಇರಲಾರ. ಒಂದು ಸುಂದರ ಉದಾಹರಣೆ. ಒಂದು ಹಣ್ಣು ಚಿಕ್ಕು ತೆಗೆದುಕೊಂಡು ಅದನ್ನು ಹಿಂಡೋಣ , ಹಿಂಡಿ...