*ಆ ನಾಮದಲ್ಲಿ ಸರ್ವಶಕ್ತಿಯೂ ಅಡಗಿದೆ.....*

*ಆ ನಾಮದಲ್ಲಿ ಸರ್ವಶಕ್ತಿಯೂ ಅಡಗಿದೆ.....*

ಸರ್ವವನ್ನೂ ತಿಳಿಯಲು ನನಗಾಗದು. ಸರ್ವವನ್ನೂ ತಿಳಿಯಲು ತೀಕ್ಷ್ಣ ಮತಿವಂತರೇ ಆಗಿರಬೇಕು. ತೀಕ್ಷಮತಿ ಎನಗಿಲ್ಲ. ಇರುವ ತೀಕ್ಷ್ಣತೆಯನ್ನು ಮಂಡು ಮಾಡಿಕೊಂಡವನು ನಾನು. ಅಂತೆಯೇ ದುರ್ಬಲ. ಹೇಡಿ. ದೀನ. ಇಂತಹ ನನಗೂ ಅನುಕೂಲವಾಗುವಂತಹದ್ದು ಏನಾದರೂ ಇದೆಯಾ.... ???

ಆಪತ್ತುಗಳ ಸರಮಾಲೆ, ಕಷ್ಟಗಳ ಸುರಿಮಳೆ, ದುಃಖದ ಅಲೆಗಳು,  ಅವಮಾನದ ಬೇಗುದಿ, ಅಭಿಮಾನ ಮೋಹಗಳ ಸುಳಿ, ಇವೆಲ್ಲವೂ ಏಕಕಾಲಕ್ಕೆ ಎಲ್ಲಿಯಾದರೂ ಅಪ್ಪಳಿಸಿದ ನಿದರ್ಶನವಿದೆ ಎಂದರೆ ಅದು ನಾನೇ ಆಗಿರಬಹುದು. ಈ ಎಲ್ಲದರಿಂದ ಹೊರಬರಲು ಉಪಾಯವೇನಾದರೂ ಇದೆಯಾ.. ??

ಸರ್ವ ಸಮರ್ಥ, ಸಕಲಶಕ್ತ, ಸಕಲಾಭೀಷ್ಟಪ್ರದ  ಆ ನಾಮವೇ *ಕೃಷ್ಣ* ನ ನಾಮ. ಎಲ್ಲದಕ್ಕೂ ಉತ್ತರ. ಅಂತೆಯೇ  "ಕೃಷ್ಣನ್ನ ನೆನದರೆ ಕಷ್ಟ ಒಂದಿಷ್ಟಿಲ್ಲ ಕೃಷ್ಣಾ ಎನಬಾರದೆ"  ಎಂದರು ದಾಸರುಗಳು.

*ಕೃಷ್ಣನ ನಾಮದಲ್ಲಿ ಆ ಶಕ್ತಿ ಉಂಟೇ....????*

ಕೃಷ್ಣನ‌ ನಾಮದಲ್ಲಿ ಸಕಲವಿಧ ಆಪತ್ತುಗಳನ್ನೂ ಖಂಡಿಸುವ ಮಹಾನ್ ಶಕ್ತಿ ಇದ್ದೇ ಇದೆ. ಅಂತೆಯೇ ಕೃಷ್ಣನ ನಾಮದ ಬಲದಿಂದ ದ್ರೌಪದಿ ಅವಮಾನದಿಂದ ಪಾರಾದಳು. ಗಜೇಂದ್ರ ಅಪಮೃತ್ಯುವಿನಿಂದ ಪಾರಾದ. ಅಜಾಮಿಳ ಪಾಪ ಕಳೆದುಕೊಂಡ. ಪರೀಕ್ಷಿತ ಮೋಕ್ಷವನ್ನೇ ಪಡೆದ. ಇತಿಹಾಸ ಪುರಾಣಗಳಲ್ಲಿ ಇಂತಹ ಕೋಟಿ ನಿದರ್ಶನಗಳನ್ನು ಕಾಣಬಹುದು.

*ನಾವೂ ನಿತ್ಯ ಈ ನಾಮವನ್ನೇ ಕೂಗ್ತೇವೆ ಮತ್ತು ಜಪಿಸುತ್ತೇವೆ ಅಲ್ವೆ.... ?? ಫಲವೇನು ಸಿಕ್ಕಿದೆ.. ??*

 ರೋಗ ಗುಣವಾಗಿಲ್ಲ ಎಂದರೆ ವೈದ್ಯರು ಹೇಳಿದಕ್ರಮದಲ್ಲಿ  ಪಥ್ಯಮಾಡದ ನನ್ನ ತಪ್ಪೇ ಹೊರತು,  ವೈದ್ಯರೇ ಸರಿ ಇಲ್ಲ ಎನ್ನುವದು ಶುದ್ಧತಪ್ಪು. ಹಾಗೆಯೇ ನಾಮ ಜಪಿಸಿದರೂ ಕೂಗಿದರೂ ಫಲಸಿಕ್ಕಿಲ್ಲವೆಂದ ಮಾತ್ರಕ್ಕೆ , ಕೂಗಿದ ನನ್ನ ಕ್ರಮದಲ್ಲಿ ವ್ಯತ್ಯಸ್ತವಿದೆಯೇ ಹೊರತು ನಾಮದಲ್ಲಿ ಶಕ್ತಿ ಇಲ್ಲ ಎಂದು ಹೇಳಲು ಬರದು.

*ನಿತ್ಯ ಜಪಿಸುವ ನನ್ನ ಕ್ರಮ ಸರಿ ಇಲ್ಲವೇ.....*

ಕ್ರಮ ಸರಿ ಇಲ್ಲ ಎಂದು ಹೆಳಲು ನಾನು ಅಸಮರ್ಥ. ಆದರೆ ಒಂದನ್ನು ಹೇಳಬಹುದು *ಪತಿವ್ರತೆಗೆ ಪತಿಯ ಮೇಲಿನ ಪ್ರೇಮ, ತಾಯಿಗೆ ತನ್ನ ಮಗುವಿನ ಮೇಲಿನ ವಾತ್ಸಲ್ಯ, ಕೃಪಣನಿಗೆ ತನ್ನ ಹಣದ ಮೇಲಿನ ಮೋಹ- ಈ ಮೂರರ ಶಕ್ತಿಗಳೂ ಭಗವಂತನ ನಾಮದ ಮೇಲಣ ಭಕ್ತಿಯಲ್ಲಿ ಮುಪ್ಪರಿಗೊಂಡರೆ ಆ ನಾಮದ ಪ್ರತಿಶಕ್ತಿಯೂ ಕ್ಷಣ ಕ್ಷಣಕ್ಕೆ ಪ್ರತಿಫಲಿಸಲು ಆರಂಭಿಸುತ್ತದೆ.* ಇಲ್ಲವಾದಲ್ಲಿ ಸರ್ವಥಾ ಇಲ್ಲ. ನಾಮ‌ಜಪ ಎಣಿಕೆಗೆ ಮಾತ್ರ ಸೀಮಿತವಾಗುತ್ತದೆ. ಇಲ್ಲವೋ ಅತ್ಯಲ್ಪ ಫಲಸಿಗತ್ತೆ.

*ಅಚ್ಯುತ ಅನಂತ ಗೋವಿಂದ* ಈ ನಾಮಗಳ ಸ್ಮರಣೆ ಜಪ ಮಾಡುವವರಿಗೆ ಆನಂದದ ಲಾಭವಿದ್ದೇ ಇದೆ. ಭಗವಂತನ ಚಿಂತನೆ ಬದುಕಿಗೆ ಬಹುದೊಡ್ಡ ಸಹಾಯವಾಗುತ್ತದೆ. ನಾಮಸ್ಮರಣೆ, ಜಪ, ಧ್ಯಾನ ಮಾಡಿದರೆ ಬುದ್ಧಿ ಶುದ್ಧವಾಗುತ್ತದೆ. ಅರಿಷಡ್ವರ್ಗದ ದಮನವಾಗುತ್ತದೆ. ಮಾನಸಿಕ ದೈಹಿಕ ರೋಗಗಳ ನಿವಾರಣೆ ಆಗುತ್ತದೆ. ಉದ್ವಿಗ್ನತೆ ಹತಾಶೆಗಳು ತಳಮಳಗೊಂಡು ಓಡಿಹೋಗುತ್ತವೆ.  ಮನಸ್ಸು ನಿಜವಾಗಿಯೂ ನಿರಾಳವಾಗುತ್ತದೆ. ದ್ವೇಶ ಅಸೂಯೆ, ಮಾತ್ಸರ್ಯ, ತಿಳಿದೂ ಮಾಡುವ ತಿರಸ್ಕಾರ, ಏನು ಎದುರಾದರೂ ಶಾಂತಚಿತ್ತತೆ ಆವರಿಸುತ್ತದೆ.

ರಾಮ ಕೃಷ್ಣ ನರಸಿಂಹ ವೇದವ್ಯಾಸ ಅಚ್ಯುತ ಅನಂತ ಗೋವಿಂದ ಇತ್ಯಾದಿ ನಾಮಗಳ ಸ್ಮರಣೆ, ಜಪ, ಚಿಂತನೆ ದಿನಕ್ಕೆ ಕೆಲ ಹೊತ್ತಾದರೂ ಅತ್ಯಂತ ಅನುರಾಗದಿಂದ  ಸ್ವಲ್ಪ ಜಪ ಮಾಡಿ ನೋಡೋಣ. ಅನುರಾಗ ಪೂರ್ವಕ ಅವನ ಹೆಸರು ಕೂಗಿ ನೋಡೋಣ. ಒಂದುಬಾರಿಯಾದರೂ ಆ ನಾಮದಲ್ಲಿ ಅಡಗಿದ ಸರ್ವವಿಧದ ಶಕ್ತಿಯನ್ನು ಅನುಭವಿಸಿನೋಡೋಣ.....

*✍🏽✍🏽✍ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*